ರಾಯಚೂರು: ರಾಯಚೂರು: ನೆರೆ ಹಾವಳಿಯಿಂದ 8 ಸಾವಿರ ಕೋಟಿ ರೂ.ಗಳ ರಸ್ತೆಗಳು ಹಾಳಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಹಣ ಬಿಡುಗಡೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಕಲ್ಯಾಣ ಕರ್ನಾಟಕ ಧ್ವಜಾರೋಹಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿ ಕುರಿತು ಸರ್ವೆ ಬಹುತೇಕ ಮುಗಿದಿದೆ, ಕೆಲ ಜಿಲ್ಲೆಗಳ ವರದಿ ಬರಬೇಕಿದೆ. ಎನ್‍ಡಿಆರ್ ಎಫ್, ಎಸ್‍ಡಿಆರ್ ಎಫ್ ನಿಯಮಗಳ ಪ್ರಕಾರ ಶೀಘ್ರದಲ್ಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ತಗ್ಗು ಪ್ರದೇಶದ ಜನರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಹಳೇ ಮನೆಗಳನ್ನು ಬಿಟ್ಟು ಬಂದಲ್ಲಿ ಹೊಸ ಮನೆ ಕಟ್ಟಿಕೊಡುತ್ತೇವೆ. ಇಲ್ಲದಿದ್ದರೆ ಮನೆ ರಿಪೇರಿಗೆ ಹಣ ಕೊಡುತ್ತೇವೆ. ಎನ್‍ಡಿಆರ್‍ಎಫ್ ನಿಂದ ಹಣ ಬರುವವರೆಗೆ ಕಾಯುವುದಿಲ್ಲ. ರಾಜ್ಯ ಸರ್ಕಾರದಿಂದಲೇ ಪರಿಹಾರ ನೀಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.
ಹೈದರಾಬಾದ್ ಕರ್ನಾಟಕ(ಕಲ್ಯಾಣ ಕರ್ನಾಟಕ) ಭಾಗದ ಜಿಲ್ಲೆಗಳಲ್ಲಿ ಕೇವಲ ಶೇ.57ರಷ್ಟು ಹಣ ಮಾತ್ರ ಖರ್ಚಾಗಿದೆ. ಡಿಸೆಂಬರ್ ಒಳಗೆ ಶೇ.75ರಷ್ಟು ಅಭಿವೃದ್ಧಿ ಕಾರ್ಯ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎನ್‍ಡಿಆರ್‍ಎಫ್ ನಿಯಮದ ಪ್ರಕಾರ ನೀಡುವ ಹಣ ರೈತರಿಗೆ ಸಾಲುವುದಿಲ್ಲ. ಹೀಗಾಗಿ ಹೆಚ್ಚು ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಒತ್ತಾಯ ಮಾಡಿದ್ದೇವೆ. ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಹಿಂದಿ ಹೇರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕನ್ನಡ 2,500 ವರ್ಷಗಳ ಹಳೆಯ ಭಾಷೆಯಾಗಿದ್ದು, ಬೇರೆ ಭಾಷಿಕರು ನಮ್ಮನ್ನ ಆಳಿದರೂ ಸಹ ಕನ್ನಡ ಗಟ್ಟಿಯಾಗಿ ನಿಂತಿದೆ. ಆಗಲೂ ಭಾಷೆ ನಶಿಸಿಹೋಗಿಲ್ಲ, ಹೋಗುವುದೂ ಇಲ್ಲ. ಕನ್ನಡ ಭಾಷೆ ತಾಯಿ ಸಮಾನ ಎಂದು ತಿಳಿಸಿದರು.