ಕುಮಾರಸ್ವಾಮಿ, ದೇವೇಗೌಡರ ವಿರುದ್ಧ ಸಿಡಿದ ಚೆಲುವರಾಯಸ್ವಾಮಿ!

ಮಂಡ್ಯ: ಜೆಡಿಎಸ್​ ಪಕ್ಷದಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಾಂಗ್ರೆಸ್​ನೊಂದಿಗೆ ಸೇರಿ ಮೈತ್ರಿ ಸರ್ಕಾರ ರಚನೆಯಾದಾಗಲೇ ಹಲವರು ತಮ್ಮ ನಾಯಕರ ನಿರ್ಧಾರದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದೀಗ ಸರ್ಕಾರ ಪತನದ ನಂತರ ಭಿನ್ನಮತ ಇನ್ನಷ್ಟು ಹೆಚ್ಚಾಗಿದೆ. ಜಿ.ಟಿ. ದೇವೇಗೌಡ, ಎಸ್​.ಆರ್. ಶ್ರೀನಿವಾಸ್​ ಈಗಾಗಲೇ ಹಲವೆಡೆ ಸಾರ್ವಜನಿಕವಾಗಿಯೇ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದೀಗ ಮಾಜಿ ಸಚಿವ ಚೆಲುವರಾಯಸ್ವಾಮಿ ಕೂಡ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ಮತ್ತು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿಯವರ ಸಿಎಂ ಪಟ್ಟ ಉಳಿಸಲು ಡಿಕೆ ಶಿವಕುಮಾರ್ ಎಲ್ಲರನ್ನೂ ಎದುರುಹಾಕಿಕೊಂಡರು. ಆದರೆ, ಅದಕ್ಕೆ ಪ್ರತಿಯಾಗಿ ಕುಮಾರಸ್ವಾಮಿಯವರು ಏನು ಮಾಡಿದರು? ಡಿಕೆಶಿ ಸಂಕಷ್ಟದ ಸ್ಥಿತಿಯಲ್ಲಿ ಇಂದು ಅವರ ಪರವಾಗಿ ಹೆಚ್​ಡಿಕೆ ನಿಲ್ಲಲಿಲ್ಲ. ಇದೇ ಕುಮಾರಸ್ವಾಮಿ ಅವರಿಗೆ ಇಂತಹ ಕಷ್ಟ ಬಂದಿದ್ದರೆ ಡಿಕೆಶಿ ಪೊಲೀಸ್ ಸ್ಟೇಷನ್ ಬಳಿಯಲ್ಲೇ ಕುಳಿತಿರುತ್ತಿದ್ದರು. ಕುಮಾರಸ್ವಾಮಿಯವರು ಡಿಕೆಶಿ ಪರವಾಗಿ ನಿಂತಿದ್ದರೆ ಅವರಿಗೆ ಮಾನಸಿಕವಾಗಿ ಧೈರ್ಯ ಬರುತ್ತಿತ್ತು ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ಬಂಧನವಾದಾಗ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೋಗದೇ ಇದ್ದಿದ್ದಕ್ಕೆ ಕಾರಣಗಳಿವೆ. ಡಿಕೆಶಿಗೆ ದರೋಡೆ ಮಾಡೋಕೆ ನಾವು ಹೇಳಿದ್ವಾ? ಎಂದು ಕುಮಾರಸ್ವಾಮಿಯವರು ಮೈಸೂರಿನ ಜೆಡಿಎಸ್​ ಕಾರ್ಯಕ್ರಮದಲ್ಲಿ ಕೇಳಿದ್ದರು. ಇದೇ ಕಾರಣಕ್ಕೆ ಅವರು ಡಿಕೆಶಿ ಬಂಧನವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ. ಡಿಕೆಶಿ ಬಂಧನಕ್ಕೆ ನಾನು ಹೊಣೆಯಾ? ನಾನೇಕೆ ಅದನ್ನು ಪ್ರತಿಭಟಿಸಬೇಕು? ಎಂದು ಕುಮಾರಸ್ವಾಮಿ ಕೇಳಿದ್ದರು ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಈ ವಿಷಯದ ಕುರಿತು ಚರ್ಚೆಗಳು ಶುರುವಾಗುತ್ತಿದ್ದಂತೆ ಆ ಸಭೆಯಲ್ಲಿ ಹೀಗೆ ಹೇಳಿದ್ದರೆಂದು ನನಗೆ ಬೇರೆ ಯಾರೋ ಹೇಳಿದ್ದರು ಎಂದು ಜಾರಿಕೊಂಡಿದ್ದಾರೆ.

ಡಿಕೆಶಿ ಪರವಾಗಿ ಒಕ್ಕಲಿಗ ಸಂಘಟನೆಗಳಿಂದ ನಡೆದ ಹೋರಾಟಕ್ಕೂ ಹೆಚ್​ಡಿಕೆ ಬೆಂಬಲ ನೀಡಲಿಲ್ಲ.ಅದೇ ದಿನ ಚನ್ನಪಟ್ಟಣದಲ್ಲಿ ಕಾರ್ಯಕ್ರಮ ಹಾಕಿಕೊಂಡರು. ಅವರು ಉದ್ದೇಶಪೂರ್ವಕವಾಗಿ ಚನ್ನಪಟ್ಟಣಕ್ಕೆ ಹೋಗಿದ್ರಾ? ಎಂಬುದು ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಮಾಡಬಾರದ ಅಪರಾಧವನ್ನೇನೂ ಮಾಡಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲು ಡಿಕೆಶಿ ಬಿಡಲಿಲ್ಲ. ಕಾಂಗ್ರೆಸ್ ರಕ್ಷಣೆ ಮಾಡಿಕೊಳ್ಳಲು ನಿಂತಿದ್ದ ಅವರ ಬಗ್ಗೆ ಬಿಜೆಪಿ ನಾಯಕರಿಗೆ ಸಿಟ್ಟಿತ್ತು. ಆ ಕೋಪವನ್ನು ಈ ರೀತಿ ತೀರಿಸಿಕೊಂಡಿದ್ದಾರೆ ಎಂದು ಚೆಲುವರಾಯಸ್ವಾಮಿ ಆರೋಪಿಸಿದ್ದಾರೆ.

ದೇವೇಗೌಡರು ಹೇಳೋದೆಲ್ಲ ಸುಳ್ಳು. ಅವರಿಂದ ಅನೇಕರಿಗೆ ನೋವಾಗಿದೆ. ಜನರಿಗೆ ಮನವರಿಕೆ ಆಗುವವರೆಗೂ ಇದು ನಡೆಯುತ್ತಲೇ ಇರುತ್ತದೆ. ಜನರಿಗೆ ಅರ್ಥವಾದಾಗ ಎಲ್ಲವೂ ಸರಿಹೋಗುತ್ತದೆ. ಆ ದಿನ ಬೇಗ ಬಂದೇ ಬರುತ್ತದೆ. ಜಿ.ಟಿ. ದೇವೇಗೌಡರು ಜೆಡಿಎಸ್​ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಎಸ್​.ಆರ್. ಶ್ರೀನಿವಾಸ್ ಕೂಡ ಸಿಡಿದೆದ್ದು ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಜೆಡಿಎಸ್ ವರಿಷ್ಠರು ಯಾರೇ ಹೋದರೂ, ಯಾರೇ ಬಂದರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಭಾಗದ ಜನ ತಮ್ಮನ್ನು ನಂಬುತ್ತಾರೆ, ಯಾವುದೇ ಸರ್ಕಾರಗಳಲ್ಲಿ ಕಿಂಗ್ ಮೇಕರ್ ಆಗುತ್ತೇವೆ ಎಂದುಕೊಂಡಿದ್ದಾರೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ತಮ್ಮ ಪಕ್ಷದ ನಾಯಕರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಒಕ್ಕಲಿಗರು ಬೆಳೆಯಲು ದೇವೇಗೌಡರೇ ಬಿಡುವುದಿಲ್ಲ ಎಂಬ ನಾರಾಯಣಗೌಡರ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿರುವ ಚೆಲುವರಾಯಸ್ವಾಮಿ, ಇಂದು ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಬಹಳಷ್ಟು ಒಕ್ಕಲಿಗರು ಈ ಪರಿಸ್ಥಿತಿ ಎದುರಿಸಿದ್ದಾರೆ. ಮಾಜಿ ಮಂತ್ರಿಯಾಗಿ ಸ್ವಲ್ಪ ಗುರುತಿಸಿಕೊಂಡರೆ ಜೆಡಿಎಸ್ ನಲ್ಲಿ ಉಳಿಗಾಲವಿಲ್ಲ. ಜೆಡಿಎಸ್ ಅನ್ನು ಸಾರ್ವತ್ರಿಕ ಪಕ್ಷವಾಗಿ, ರಾಜಕೀಯ ಪಕ್ಷವಾಗಿ ಬೆಳೆಸಲಿಲ್ಲ. ಪಕ್ಷವನ್ನು ಕೇವಲ ಕುಟುಂಬದ ಹಿಡಿತಕ್ಕೆ ಸೀಮಿತಗೊಳಿಸಿದರು. ಅದರಿಂದ ಯಾರೂ ಬೆಳೆಯಲು ಸಾಧ್ಯವಾಗಲಿಲ್ಲ ಎಂದು ಚೆಲುವರಾಯಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ