ಬೆಂಗಳೂರು, ಸೆ.15- ಶೀಘ್ರದಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಪುರಭವನದಲ್ಲಿ ಶ್ರೀರಾಮಸೇನೆ ಏರ್ಪಡಿಸಿದ್ದ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಧ್ವಂಸಗೊಳಿಸಿ ಬಾಬರಿ ಮಸೀದಿ ಕಟ್ಟಲಾಗಿದೆ. ಇದೀಗ ಅದೇ ಜಾಗದಲ್ಲಿ ರಾಮಮಂದಿರ ನಿರ್ಮಿಸಲಾಗುವುದು ಎಂದು ಹೇಳಿದರು.
ದೇಶದ ಗಡಿ ಭಾಗ ಲಾಲ್ ಚೌಕ್ನಲ್ಲಿ ಪಾಕ್ ಧ್ವಜ ಕಿತ್ತು ಹಾಕಿದಂತೆ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ಬಿಜೆಪಿ ಸರ್ಕಾರದಲ್ಲಿ ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧಿಸಲಾಗಿತ್ತು. ಆದರೆ, ಕಾಂಗ್ರೆಸ್ ನಿಷೇಧ ರದ್ದುಗೊಳಿಸಿತು. ಪ್ರಸ್ತುತ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮತ್ತೆ ಗೋ ಹತ್ಯೆ ನಿಷೇಧಿಸಲಾಗುವುದು. ನಾನು ವಿಧಾನಸಭೆಯಲ್ಲಿ ಆಯ್ಕೆಯಾಗಿದ್ದು, ನಾನಂತೂ ಮುಸ್ಲಿಮರ ವೋಟ್ ಕೇಳಿಲ್ಲ. ಆದರೂ, 47 ಸಾವಿರ ವೋಟ್ ಮೂಲಕ ಗೆದ್ದಿದ್ದೇನೆ ಎಂದರು.