ಮೋದಿಯವರಿಗೆ ಹುಲ್ಲುಗಾವಲು ಆಗಿರುವ ರಾಜಕೀಯ-ಎಚ್.ಎಸ್.ದೊರೆಸ್ವಾಮಿ

ಬೆಂಗಳೂರು, ಸೆ.14- ಮೋದಿ ಮತ್ತು ಅಮಿತ್ ಷಾ ಅವರು ಸರ್ವಾಧಿಕಾರಿ ಧೋರಣೆಯಿಂದ ಎಲ್ಲ ಪಕ್ಷಗಳನ್ನು ನಾಶ ಮಾಡುತ್ತಿದ್ದು, ಹೀಗಾಗಿ ಪ್ರತಿಪಕ್ಷವೆ ಇಲ್ಲದಂತಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕಿಡಿಕಾರಿದರು.

ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ವತಿಯಿಂದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಿದ್ದ ಶೋಷಿತರ, ಪ್ರಗತಿಪರ, ದಲಿತರ ಹಾಗೂ ಅಲ್ಪಸಂಖ್ಯಾತರ ಧ್ವನಿಯಾಗಿದ್ದ ಎ.ಕೆ.ಸುಬ್ಬಯ್ಯರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಮೋದಿಯವರಿಗೆ ಹುಲ್ಲುಗಾವಲು ಆಗಿದೆ. ಅವರಿಗೆ ಪ್ರತಿಸ್ಪರ್ಧಿ ಇಲ್ಲದಂತಾಗಿದೆ, ಅವರನ್ನು ವಿರೋಧಿಸುವ ಗಟ್ಟಿತನ ಜಯಪ್ರಕಾಶ್, ಮತ್ತು ಎ.ಕೆ ಸುಬ್ಬಯ್ಯ ಅವರಲ್ಲಿತ್ತು ಅಂತವರ ಅಗತ್ಯ ನಮಗಿದೆ. ಟಿಪ್ಪು ಸಂಘಟನೆ ಅಡಿ ಎಲ್ಲರೂ ಸಂಘಟಿತರಾಗಿ ಸ್ಥಾನಮಾನ ಮರೆತು ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಡಬೇಕು ಎಂದು ಹೇಳಿದರು.

ಆರ್‍ಎಸ್‍ಎಸ್, ಬಿಜೆಪಿಯನ್ನು ಕಟ್ಟಲು ಎ.ಕೆ.ಸುಬ್ಬಯ್ಯ ಹೆಚ್ಚು ಶ್ರಮಿಸಿದ್ದರು. ಆದರೆ ಅವರನ್ನು ಬಿಜೆಪಿಯವರು ತುಳಿಯುವ ಕೆಲಸ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲ ಬಡವರಿಗೆ ಸರ್ಕಾರದಿಂದ ಎರಡು ಎಕರೆ ಜಮೀನು ನೀಡುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ ಈವರೆಗೂ ಸಹ ನೀಡಿಲ್ಲ. ಜಮೀನು ಕೊಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಇದಕ್ಕಾಗಿ ನಾವು ಜೈಲು ಸೇರಲು ಸಿದ್ಧ ಎಂದು ದೊರೆಸ್ವಾಮಿ ಎಚ್ಚರಿಸಿದರು.

ಸಮಾರಂಭದಲ್ಲಿ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹಮದ್ ಖುರೇಷಿ ಮಾತನಾಡಿ, ಎ.ಕೆ.ಸುಬ್ಬಯ್ಯ ಅವರು ಟಿಪ್ಪು ಸುಲ್ತಾನ್ ಅಭಿಮಾನಿಯಾಗಿದ್ದರು. ಜಯಂತಿ ವಿರೋಧಿಸಿ ವಿವಿಧ ಜಿಲ್ಲೆಗಳಲ್ಲಿ ಮಾಡಿದ ಪ್ರಚೋದನಕಾರಿ ಪ್ರತಿಭಟನೆ ಮತ್ತು ಇತಿಹಾಸ ತಿರುಚುವಂತಹ ಹೇಳಿಕೆ ನೀಡಿದ ಟಿಪ್ಪು ವಿರೋಧಿಗಳಿಗೆ ತಕ್ಕಪಾಠ ಕಲಿಸಿ ಸಿಂಹಸ್ವಪ್ನವಾಗಿದ್ದರು ಎಂದು ಹೇಳಿದರು.

ಟಿಪ್ಪು ಬಗ್ಗೆ ಗೌರವ ಅಲ್ಲದೇ ದಲಿತರ, ಶೋಷಿತರ ಮೂಲಭೂತ ಹಕ್ಕುಗಳನ್ನು ಒದಗಿಸಲು ಮಾಡಿದ ಹೋರಾಟ ಎಂದೆಂದಿಗೂ ಮರೆಯಲಾಗದು. ಸಂಘಪರಿವಾರ ನಡೆಸಿದ ಹುನ್ನಾರದ ವಿರುದ್ಧ ಹೋರಾಡಿದ ಎ.ಕೆ.ಸುಬ್ಬಯ್ಯ ಅವರ ಆದರ್ಶಗಳು ಇಂದಿನ ಪೀಳಿಗೆಯ ಯುವಕರಿಗೆ ದಾರಿದೀಪವಾಗಿದೆ ಎಂದರು.

ಮಾಜಿ ಅಡ್ವಿಕೇಟ್ ಜನರಲ್ ರವಿಕುಮಾರ್ ವರ್ಮ, ಪ್ರೊ.ಎನ್.ವಿ.ನರಸಿಂಹಯ್ಯ, ವಕೀಲ ಬಾಲನ್, ಬಿ.ಚನ್ನಕೃಷ್ಣಪ್ಪ, ಸೈಯದ್ ಶಫಿವುಲ್ಲಾ, ಸೂಫಿ ವಲಿಬಾ ಖಾದ್ರಿ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ