ಬೆಂಗಳೂರು, ಸೆ.15-ಕೇಂದ್ರ ಸರ್ಕಾರ ಜಿಡಿಪಿ ವೃದ್ಧಿಗೆ ಯಾವುದೇ ಯೋಜನೆಗಳನ್ನು ಕೈಗೊಳ್ಳದೇ ಇರುವುದರಿಂದ ದೇಶ ಇಂದು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಮೌರ್ಯ ಹೊಟೇಲ್ ಮುಂಭಾಗ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಆಶ್ರಯದಲ್ಲಿ ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ಉದ್ಯೋಗ ಸೃಷ್ಟಿಗೆ ನರೇಂದ್ರ ಮೋದಿ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹಾಗಾಗಿ ದೇಶದ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಆರ್ಥಿಕ ಸುಧಾರಣೆಗೆ ಒತ್ತು ನೀಡದೆ ರಿಸರ್ವ್ ಬ್ಯಾಂಕ್ ನಲ್ಲಿ ಮೀಸಲಿಟ್ಟಿದ್ದ 1.70 ಕೋಟಿ ಹಣವನ್ನು ವಿದೇಶಕ್ಕೆ ದಾನ ಮಾಡಿದೆ. ಇದು ಅಭಿವೃದ್ಧಿ ಶೀಲ ದೇಶವಾದ ನಮಗೆ ಪೂರಕವಾದ ಪ್ರವೃತ್ತಿಯಲ್ಲ ಎಂದು ಹೇಳಿದರು.
ಉದ್ಯೋಗ ಸೃಷ್ಟಿಸುವ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ಆರ್ಥಿಕ ದಿವಾಳಿಯತ್ತ ಸಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಜವಾಬ್ದಾರಿ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಕೇವಲ ಪ್ರಚಾರಕ್ಕೋಸ್ಕರ ನರೇಂದ್ರ ಮೋದಿ ಅವರು ವಿದೇಶ ಸುತ್ತುವುದನ್ನು ಹೊರತುಪಡಿಸಿ ದೇಶದ ಅಭಿವೃದ್ಧಿಗೆ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸಿಲ್ಲ ನರೇಂದ್ರ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ವಿರೋಧ ಪಕ್ಷವನ್ನು ಹತ್ತಿಕ್ಕುವ ಒಂದಂಶದ ಕಾರ್ಯಕ್ರಮವನ್ನು ನರೇಂದ್ರ ಮೋದಿ ಅಮಿತï ಶಾ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಶ್ವದ ಖ್ಯಾತ ಅರ್ಥ ತಜ್ಞರು ಹಾಗೂ ದೇಶದ ಗೌರವಾನ್ವಿತ ಮಾಜಿ ಪ್ರಧಾನ ಮಂತ್ರಿಗಳಾದ ಡಾ.ಮನಮೋಹನ್ ಸಿಂಗ್ ಅವರ ಸಲಹೆಯನ್ನು ಸ್ವೀಕರಿಸಿ ದೇಶದ ಆರ್ಥಿಕತೆಗೆ ಗಮನ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಸ್ಥಳೀಯ ರಾಜ್ಯಗಳ ಮಾತೃ ಭಾಷೆಗೆ ಆದ್ಯತೆ ನೀಡಬೇಕು ಎಂದು ಹಿಂದಿಯನ್ನು ಯಾವುದೇ ಕಾರಣಕ್ಕೂ ಹೇರಬಾರದು ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹ ಪಡಿಸಲಾಯಿತು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್. ಮನೋಹರ್, ಜೆ.ಸಿಂಹ ಶೇಖರ್, ಆನಂದ್, ರಮೇಶ್, ಆದಿತ್ಯ, ಶಂಕರ್ ಜಿ. ಗೌಡ ಮತ್ತಿತರರು ಪಾಲ್ಗೊಂಡಿದ್ದರು.