ತಾತಾಗುಣಿ ಎಸ್ಟೇಟನ್ನು ಫಿಲ್ಮ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲು ಚಿಂತನೆ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಸೆ.15-ಕನಕಪುರ ರಸ್ತೆಯಲ್ಲಿರುವ ದೇವಿಕಾರಾಣಿ ರೋರಿಚ್ ಅವರ ತಾತಾಗುಣಿ ಎಸ್ಟೇಟನ್ನು ಫಿಲ್ಮ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದ ಎಫ್‍ಕೆಸಿಸಿಐ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಮತ್ತು ಎಫ್‍ಕೆಸಿಸಿಐ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕನಕಪುರ ರಸ್ತೆಯಲ್ಲಿ 600 ರಿಂದ 700 ಎಕರೆ ವಿಸ್ತೀರ್ಣ ಹೊಂದಿರುವ ತಾತಾಗುಣಿ ಎಸ್ಟೇಟನ್ನು ಚಿತ್ರ ನಗರಿಯನ್ನಾಗಿ ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಘೋಷಿಸಿದರು.
ಮುಂದಿನ ಏಳೆಂಟು ತಿಂಗಳೊಳಗಾಗಿ ಬೆಂಗಳೂರಿನ ಚಿತ್ರಣವನ್ನೇ ಬದಲಾವಣೆ ಮಾಡಲು ಎಲ್ಲರ ಸಲಹೆ ಪಡೆದು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

15 ದಿನಗಳಿಗೊಮ್ಮೆ ಬೆಂಗಳೂರಿನಲ್ಲಿ ನಗರ ಪ್ರದಕ್ಷಿಣೆ ಮಾಡಿ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. 11,500ಸಾವಿರ ಕೋಟಿ ರೂ. ವೆಚ್ಚದಲ್ಲಿ ನೈಸ್ ರಸ್ತೆಯಿಂದ ಹೊಸೂರು ಫೆರಿಪೆರಲ್ ರಿಂಗ್ ರಸ್ತೆ, 14 ಸಾವಿರ ಕೋಟಿ ರೂ.ನಲ್ಲಿ ಸಬ್‍ಅರ್ಬನ್ ರೈಲು, ಸುಮಾರು 11 ಸಾವಿರ ಕೋಟಿ ರೂ.ವೆಚ್ಚದಲ್ಲಿ ಕಾರಿಡಾರ್, ಅಂಡರ್‍ಪಾಸ್ ಇನ್ನಿತರ ಯೋಜನೆಗಳನ್ನು ಕೈಗೊಳ್ಳಲಾಗಿದೆ.ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ.ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು, ಅದರ ನಿವಾರಣೆಗೆ ವೈಜ್ಞಾನಿಕ ಕ್ರಮಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಇಡೀ ವಿಶ್ವ ಭಾರತವನ್ನು ಗೌರವಯುತ ಸ್ಥಾನದಲ್ಲಿ ನೋಡುತ್ತಿದೆ.ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಮೋದಿ ಐತಿಹಾಸಿಕ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ರಾಜ್ಯದ ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಎಫ್‍ಕೆಸಿಸಿಐನ ಪಾತ್ರ ಮಹತ್ವದ್ದಾಗಿದೆ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಮೈಸೂರು ವಾಣಿಜ್ಯ ಸಂಸ್ಥೆ ಎಂಬ ಸಣ್ಣ ಸಸಿ ಇಂದು ಹೆಮ್ಮರವಾಗಿ ಬೆಳೆದಿದೆ.ಕೈಗಾರಿಕೆ, ವ್ಯಾಪಾರ ಮತ್ತು ಸೇವಾವಲಯಗಳಿಂದ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಬರುತ್ತಿದೆ.ಅವರ ನಿರೀಕ್ಷೆಯಂತೆ ಬೆಂಗಳೂರನ್ನು ಅಭಿವೃದ್ಧಿ ಪಡಿಸಲು ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪಡೆದ ಅದ್ವೈತ ಹುಂಡೈನ ನಿರ್ದೇಶಕರಾದ ಡಾ.ಎಸ್.ವಿ.ಎಸ್.ಸುಬ್ರಹ್ಮಣ್ಯ ಗುಪ್ತ ಅವರು ಬೆಂಗಳೂರಿನ ಮೂಲ ಸೌಕರ್ಯಗಳ ಬಗ್ಗೆ ಮುಖ್ಯಮಂತ್ರಿಯವರ ಗಮನ ಸೆಳೆದು ಕೆಲವು ಸಲಹೆ ನೀಡಿದರು.

ರಾಜ್ಯದ ಬೊಕ್ಕಸಕ್ಕೆ ಶೇ.70ರಷ್ಟು ಆದಾಯ ಕೈಗಾರಿಕೆಗಳಿಂದಲೇ ಬರುತ್ತಿದೆ. ಅದಕ್ಕೆ ತಕ್ಕಂತೆ ಬೆಂಗಳೂರನ್ನು ಅಭಿವೃದ್ಧಿ ಮಾಡಿ ಮಳೆ ಬಂದರೆ ಜನರ ಕಷ್ಟ ನೋಡಲಾಗುವುದಿಲ್ಲ. ಕೊರಿಯಾದ ಹುಂಡೈ ಕಂಪನಿ ಬೆಂಗಳೂರಿನಲ್ಲಿ ಎರಡನೇ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿತ್ತು. ಆದರೆ ಇಲ್ಲಿನ ಸರ್ಕಾರಗಳ ಮತ್ತು ಅಧಿಕಾರಿಗಳ ಅಸಹಕಾರದಿಂದ ಆಗಲಿಲ್ಲ. ಬೆಂಗಳೂರಿನಲ್ಲಿ ಸ್ವಚ್ಛತೆ, ತ್ಯಾಜ್ಯ ಸಂಸ್ಕರಣೆ, ವಿದ್ಯುತ್ ಉತ್ಪಾದನೆಯಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಸಿ.ಟನಲ್ ರಸ್ತೆಗಳನ್ನು ಹೆಚ್ಚಾಗಿ ಅಭಿವೃದ್ಧಿ ಪಡಿಸಿ ಎಂದು ಸಲಹೆ ನೀಡಿದರು.

ಈ ಮೊದಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಬಳಿ ಫಿಲ್ಮ್ ಸಿಟಿ ಸ್ಥಾಪಿಸಲು ಯೋಜಿಸಲಾಗಿತ್ತು.ಅದಕ್ಕಾಗಿ ಭೂಮಿ ಗುರುತಿಸುವ ಕೆಲಸ ನಡೆದಿತ್ತು.ಈಗ ಯಡಿಯೂರಪ್ಪ ಅವರು ಬೆಂಗಳೂರು ಹೊರವಲಯದ ದೇವಿಕಾರಾಣಿ ರೋರಿಚ್ ಎಸ್ಟೇಟ್‍ನ್ನು ಫಿಲ್ಮ್ ಸಿಟಿಯನ್ನಾಗಿ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ.
ರಾಜ್ಯಪಾಲ ವಜೂಭಾಯಿ ವಾಲಾ, ಎಫ್‍ಕೆಸಿಸಿಐನ ಅಧ್ಯಕ್ಷರಾದ ಸಿ.ಆರ್.ಜನಾರ್ಧನ್, ಉಪಾಧ್ಯಕ್ಷರಾದ ಐ.ಎಸ್.ಪ್ರಸಾದ್, ಪೆರಿಕಲ್ ಎಂ.ಸುಂದರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ