ಬೆಂಗಳೂರು, ಸೆ.14- ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರ ಸ್ವಾಮಿಯವರು ಕಿಡಿಕಾರಿದ್ದು, ಟ್ವೀಟರ್ನಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ಹಿಂದಿ ರಾಷ್ಟ್ರ ಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಿಸಬೇಕು.ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎಂಬುದನ್ನು ಮರೆಯಬಾರದು.ಸುಳ್ಳು, ತಪ್ಪು ಮಾಹಿತಿ ಮೂಲಕ ಭಾಷೆಯನ್ನು ಬೆಳೆಸಲಾಗದು, ಪರಸ್ಪರ ಪ್ರೀತಿ ಮತ್ತು ಕೊಡು-ಕೊಳ್ಳುವಿಕೆಯಿಂದ ಭಾಷೆ ಬೆಳೆಯುತ್ತದೆ ಎಂದಿದ್ದಾರೆ.
ಭಾಷೆಗಳು ಜ್ಞಾನದ ಕಿಂಡಿಗಳು.ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ, ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ. ಅದರ ಬಲವಂತದ ಹೇರಿಕೆ ವಿರುದ್ಧ. ಹಿಂದಿ ದಿವಸ್ ಆಚರಣೆಗೆ ನನ್ನ ವಿರೋಧವೂ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ಕನ್ನಡಿಗರು ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ಅದನ್ನು ನೆನಪಿನಲ್ಲಿಟ್ಟುಕೊಳ್ಳಿ ನರೇಂದ್ರ ಮೋದಿಯವರೇ ಎಂದಿದ್ದಾರೆ.
ಇಂದು ದೇಶಾದ್ಯಂತ ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಿಸುತ್ತಿದೆ.ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡ ಭಾಷಾ ದಿವಸವನ್ನು ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿಯವರೇ?ಎಂದು ಪ್ರಶ್ನಿಸಿದ್ದಾರೆ.
ಕನ್ನಡಿಗರು ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ಎಂಬುದು ನೆನಪಿರಲಿ.ಹಿಂದಿ ಹೇರಿಕೆಯನ್ನು ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ.