ಬೆಂಗಳೂರು, ಸೆ.6- ಐಪಿಎಸ್ ಅಧಿಕಾರಿ ಅಣ್ಣಮಲೈ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಮತ್ತೊಬ್ಬ ಐಎಎಸ್ ಅಧಿಕಾರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮಂಗಳೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸಸಿಕಾಂತ್ ಸೆಂಥಿಲ್ ಅವರು ಇಂದು ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧವಾಗಿ ಸರ್ಕಾರ ಅಸಂವಿಧಾನಿಕವಾಗಿ ರಾಜಿ ಮಾಡಿಕೊಳ್ಳುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಭಾರೀ ಸವಾಲುಗಳು ಎದುರಾಗುವ ಸಾಧ್ಯತೆಗಳಿವೆ. ಹಾಗಾಗಿ ನಾನು ಸರ್ಕಾರಿ ಸೇವೆಯಲ್ಲಿ ಮುಂದುವರೆಯಲು ಇಚ್ಚಿಸುತ್ತಿಲ್ಲ. ಐಎಎಸ್ ಹೊರತಾಗಿ ನಾನು ನನ್ನ ಕೆಲಸವನ್ನು ಮುಂದುವರೆಸುವುದು ಸೂಕ್ತ ಎನಿಸುತ್ತದೆ. ಈ ಎಲ್ಲಾ ಬೆಳವಣಿಗೆಗಳೊಂದಿಗೆ ನಾನು ಯಥಾರೀತಿ ಹೊಂದಾಣಿಕೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ನಾನು ಸ್ವಪ್ರೇರಣೆಯಿಂದ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ಹಿಂದೆ ಯಾವುದೇ ವ್ಯಕ್ತಿ ಇಲ್ಲ. ನಾನು ಕೆಲಸ ಮಾಡುತ್ತಿರುವ ಹುದ್ದೆಯಲ್ಲಿನ ಬೆಳವಣಿಗೆಗಳಿಗೂ ಸಂಬಂಧವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಮತ್ತು ಜನಪ್ರತಿನಿಧಿಗಳು ತೋರಿಸಿರುವ ಪ್ರೀತಿ ಅಪಾರವಾದದ್ದು, ನನ್ನ ಕರ್ತವ್ಯಗಳನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಿರುವುದಕ್ಕೆ ಎಲ್ಲರ ಕ್ಷಮೆ ಕೇಳುತ್ತೇನೆ. ನನ್ನೊಂದಿಗೆ ಕೆಲಸ ಮಾಡಿದ ಎಲ್ಲಾ ಅಧಿಕಾರಿ, ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದ್ದಾರೆ.
2009 ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಷ್ಟ್ರದಲ್ಲಿ 9ನೇ ಸ್ಥಾನಗಳಿಸಿದ್ದ ಸಸಿಕಾಂತ್ ಸೆಂಥಿಲ್ ಅವರು ಅತ್ಯಂತ ಕ್ರಿಯಾಶೀಲ ಅಧಿಕಾರಿ ಎಂದು ಗುರುತಿಸಿಕೊಂಡಿದ್ದರು.
ಮೂಲತಃ ತಮಿಳುನಾಡಿನವರಾದ ಸೆಂಥಿಲ್ ಬಿಇ ಎಲೆಕ್ಟ್ರಾನಿಕ್ಸ್ ಪದವಿ ಪಡೆದು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ನಾಟಕಕ್ಕೆ ಆಗಮಿಸಿದ್ದರು. ಮೊದಲು ಬಳ್ಳಾರಿಯಲ್ಲಿ ಉಪವಿಭಾಗಾಧಿಕಾರಿಯಾಗಿ, ಶಿವಮೊಗ್ಗದ ಜಿಪಂ ಸಿಇಒ ಆಗಿ, ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲಾಧಿಕಾರಿಯಾಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಂತರ ಮಂಗಳೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು.
ತಮಿಳು, ಇಂಗ್ಲಿಷ್ ಜತೆಗೆ ಕನ್ನಡ ಭಾಷೆಯನ್ನೂ ಕಲಿತಿದ್ದ ಸೆಂಥಿಲ್ ತುಳು ಭಾಷೆ ಕಲಿಯುವ ಪ್ರಯತ್ನವನ್ನೂ ಮಾಡಿದ್ದರು. ಸಸಿಕಾಂತ್ ಸೆಂಥಿಲ್ ಅವರ ಅವಧಿಯಲ್ಲಿ ಮಂಗಳೂರಿನಲ್ಲಿ ಕೋಮು ಸೌರ್ಹಾದತೆ ಸುಸ್ಥಿತಿಯಲ್ಲಿತ್ತು.