ನವದೆಹಲಿ,ಸೆ.6- ನೌಕಾಪಡೆ ಸೇರಿದಂತೆ ವಿವಿಧ ರಕ್ಷಣಾ ದಳಗಳ ನಡುವಣ ಬಾಂಧವ್ಯ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ ಇಂದು ಮಹತ್ವದ ಒಪ್ಪಂದ ಏರ್ಪಟ್ಟಿದೆ.
ಭಾರತ ಪ್ರವಾಸದಲ್ಲಿರುವ ದಕ್ಷಿಣ ಕೊರಿಯಾ ರಕ್ಷಣಾ ಸಚಿವ ಜಿಯಾಂಗ್ ಕೋಯಿಂಗ್ಡೂ ಇಂದು ತಮ್ಮ ಸಹವರ್ತಿ ರಾಜನಾಥ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ, ರಕ್ಷಣಾ ಸಹಕಾರ ಸೇರಿದಂತೆ ವಿವಿಧ ದ್ವಿಪಕ್ಷೀಯ ವಿಷಯಗಳ ಕುರಿತು ಸಮಾಲೋಚಿಸಿದರು.
ಇದೇ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ನೌಕಾಪಡೆಯ ತಾಂತ್ರಿಕ ಸಹಕಾರ ಸಂಬಂಧ ಬಲಗೊಳಿಸುವುದು ಸೇರಿದಂತೆ ರಕ್ಷಣಾ ಇಲಾಖೆಯ ಅತ್ಯಾಧುನಿಕ ಉಪಕರಣಗಳ ತಂತ್ರಜ್ಞಾನ ವಿನಿಮಯ ಕುರಿತು ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಇದರೊಂದಿಗೆ ಏಷ್ಯಾದ ಪ್ರಬಲ ದೇಶಗಳಲ್ಲಿ ಒಂದಾದ ದಕ್ಷಿಣ ಕೊರಿಯಾ ಜೊತೆ ಭಾರತದ ರಕ್ಷಣಾ ಸಹಕಾರ ಮತ್ತಷ್ಟು ಬಲಗೊಂಡಂತಾಗಿದೆ.