ನವದೆಹಲಿ, ಸೆ.4- ಆರ್ಥಿಕ ಹಿಂಜರಿತದಿಂದ ದೇಶ ಜರ್ಝರಿತವಾಗುತ್ತಿದ್ದು, ಇದನ್ನು ಮರೆ ಮಾಚಿ ದೇಶದ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿ ಹೈಡ್ರಾಮಾ ಸೃಷ್ಟಿ ಮಾಡಿದೆ ಎಂದು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲಾ , ಆರ್ಥಿಕ ಹಿಂಜರಿತದಿಂದ ದೇಶದ ಆರ್ಥಿಕತೆ ಕುಸಿಯುತ್ತಿದೆ. ಇಂತಹ ಗಂಭೀರ ವಿಚಾರವನ್ನು ದೇಶದ ಜನರಿಂದ ಮರೆ ಮಾಚಲು ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರ ಬಂಧನ ಪ್ರಹಸನದ ಹೈಡ್ರಾಮಾ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮವನ್ನು ಪಕ್ಷ ಖಂಡಿಸಿರುವ ಅವರು ಕಾಂಗ್ರೆಸ್ ವಿರುದ್ಧ ಹಗೆತನ ಸಾಧಿಸುವ ಆಡಳಿತಾರೂಢ ಕೇಂದ್ರ ಸರ್ಕಾರದ ತಂತ್ರಗಾರಿಕಾ ಕ್ರಮ ಇದಾಗಿದೆ ಎಂದು ಆರೋಪಿಸಿದರು.
ಈ ಹಿಂದೆ ಆರ್ಥಿಕ ಅಭಿವೃದ್ಧಿ ಶೇ.5ಕ್ಕೆ ಕುಸಿದಾಗ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಲಾಯಿತು. ಇದೀಗ ಆರ್ಥಿಕ ಹಿಂಜರಿತದಿಂದ ಷೇರು ಮಾರುಕಟ್ಟೆ ಕುಸಿದಿದ್ದು, ಹೂಡಿಕೆದಾರರಿಗೆ 2.5 ಲಕ್ಷ ಕೋಟಿ ನಷ್ಟವಾಗಿದೆ. ಇದನ್ನು ಮರೆ ಮಾಚಲು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.