ಬೆಂಗಳೂರು, ಸೆ.4-ಚಂದಿರನ ರಹಸ್ಯ ಕುತೂಹಲಗಳ ಸಂಶೋಧನೆಗಾಗಿ ಮಹತ್ವಾಕಾಂಕ್ಷಿ ಚಂದ್ರಯಾನ-2 ಅಭಿಯಾನದ ಮತ್ತೊಂದು ಹಂತವೂ ಸಹ ಯಶಸ್ವಿಯಾಗಿದೆ. ಎರಡನೆ ಹಂತದ ಮೂನ್ ಲ್ಯಾಂಡರ್ ಡಿ ಆರ್ಬಿಟ್ ಮನೋವರ್ ಪ್ರಕ್ರಿಯೆಯನ್ನು ಇಂದು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಕೈಗೊಂಡರು.
ಇದರೊಂದಿಗೆ ಚಂದಿರನ ತಲುಪಲು ಮೂನ್‍ಲ್ಯಾಂಡರ್‍ಗೆ ಇನ್ನೊಂದೇ ಒಂದು ಹಂತ ಬಾಕಿ ಇದೆ. ಸೆ.7ರಂದು ಶನಿವಾರ ಚಂದಿರದ ಮೇಲ್ಮೈ ತಲುಪಲಿದ್ದು, ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆಯ ಮೈಲಿಗಲ್ಲು ಸ್ಥಾಪನೆಯಾಗಲಿದೆ.
ಸತತ ಮೂರು ದಿನಗಳಿಂದ ಇಸ್ರೋದ ಚಂದ್ರಯಾನ-2 ಕಾರ್ಯಾಚರಣೆ ನಿರೀಕ್ಷೆಯಂತೆ ಅತ್ಯಂತ ನಿಖರವಾಗಿ ಸಫಲವಾಗುತ್ತಿದೆ. ಮೊನ್ನೆಯಷ್ಟೇ ಚಂದ್ರಯಾನ-2 ಆರ್ಬಿಟರ್‍ನಿಂದ ವಿಕ್ರಮ್ ಲ್ಯಾಂಡರ್‍ನನ್ನು ಇಸ್ರೋ ವಿಜ್ಞಾನಿಗಳ ಯಶಸ್ವಿಯಾಗಿ ಬೇರ್ಪಡಿಸಿದ್ದರು. ನಿನ್ನೆ ಚಂದಿರನ ಮೇಲ್ಮೈನತ್ತ ಮೂನ್ ಲ್ಯಾಂಡರ್‍ನನ್ನು ತಳ್ಳುವ ಮೊದಲ ಹಂತ ಪ್ರಕ್ರಿಯೆ ಯಶಸ್ವಿಯಾಯಿತು. ಇಂದು ಎರಡನೆ ಹಂತವೂ ಕೂಡ ನಿರೀಕ್ಷೆಯಂತೆ ಪೂರ್ಣಗೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.