ಮೈಸೂರು:ಮಾ-31: ಕರ್ನಾಟಕದಲ್ಲಿ ಭ್ರಷ್ಟಾಚಾರದ ಸುನಾಮಿ ಎದ್ದಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ. ಕಾಂಗ್ರೆಸ್ ಹೈಕಮಾಂಡ್ಗೆ ಸಿದ್ದರಾಮಯ್ಯ ಸರ್ಕಾರವೇ ಎಟಿಎಂ ಆಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬೆಂಗಳೂರು ಐಟಿ ಹಬ್ ಆಗಿದ್ದರೂ ಆದಾಯ ಹೆಚ್ಚಿಸುವಲ್ಲಿ ಈ ಸರ್ಕಾರ ವಿಫಲವಾಗಿದೆ. ಕೇಂದ್ರದ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವ ರಾಜ್ಯಗಳಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದರು.
ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ನಾನು ಹಿಂದುಳಿದ ವರ್ಗದ ನಾಯಕ ಎನ್ನುವ ಸಿಎಂ ಸಿದ್ದರಾಮಯ್ಯ ಇದಕ್ಕೆ ಉತ್ತರ ನೀಡಲಿ. ಕೇಂದ್ರ ಕರ್ನಾಟಕದಲ್ಲಿ ಪರಿವಾರ ಹಾಗೂ ತಳವಾರ ಸಮುದಾಯಕ್ಕೆ ಎಸ್.ಟಿ ಸ್ಥಾನಮಾನ ನೀಡಿ ಬಹುದಿನಗಳ ಬೇಡಿಕೆ ಈಡೇರಿಸಿದೆ.
ಕರ್ನಾಟಕದ ಎಲ್ಲಾ ಬಡವರಿಗೂ ನರೇಂದ್ರ ಮೋದಿ ಸರ್ಕಾರದ ಸಂಪೂರ್ಣ ಫಲ ಸಿಗಲಿದೆ, ನನಗೆ ವಿಶ್ವಾಸವಿದೆ. 12ನೇ ಹಣಕಾಸು ಆಯೋಗದಲ್ಲಿ 88 ಸಾವಿರ ಕೋಟಿ ಹಣವನ್ನು ಕರ್ನಾಟಕಕ್ಕೆ ಕೊಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಮಾಣ 14ನೇ ಹಣಕಾಸು ಆಯೋಗದಲ್ಲಿ 2.19ಲಕ್ಷ ಕೋಟಿ ರೂಪಾಯಿ ನೀಡಲಾಯಿತು. ಇದು ನಮ್ಮ ಅಧಿಕಾರ ಅಂತಾರೆ ಸಿಎಂ ಸಿದ್ದರಾಮಯ್ಯ. ಹಾಗಾದರೆ ಸಿಎಂ ಉತ್ತರ ಕೊಡಬೇಕು ಯುಪಿಎ ಸರ್ಕಾರದಲ್ಲಿ ಯಾಕೆ ಇಷ್ಟು ಅನುದಾನ ಕೊಡಲಿಲ್ಲ ಎಂದು ಕರ್ನಾಟಕದ ಜನರಿಗೆ ತಿಳಿಸಲಿ ಎಂದು ಸವಾಲು ಹಾಕಿದರು.
ಲಿಂಗಾಯಿತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ್ದು ಮತ ಒಡೆಯುವ ಪ್ರಯತ್ನ ಅಷ್ಟೇ. ಈ ಪ್ರಯತ್ನದಲ್ಲಿ ಅವರು ಸಫಲವಾಗುವುದಿಲ್ಲ. ಬಿಜೆಪಿ ಸಮುದಾಯಗಳ ಆಧಾರದ ಮೇಲೆ ಮತ ಕೇಳಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತದೆ ಎಂದರು.
ಇದೇವೇಳೆ ಮೈಸೂರು ರಾಜವಂಶಸ್ಥ ಯದುವೀರ ಒಡೆಯರ್ ಅವರ ಭೇಟಿ ಸೌಜನ್ಯದ ಭೇಟಿ ಅಷ್ಟೇ. ನನ್ನ ಮತ್ತು ಅವರ ಮಧ್ಯೆ ನಡೆದ ಮಾತುಕತೆಯನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ ಎಂದರು.