ಬೆಂಗಳೂರು,ಆ.23-ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯ ಲಾಭ ಇಲ್ಲದೆ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ. ಅವರ ಜೊತೆ ರಾಜಕಾರಣ ಮಾಡಿದ ನನಗೆ ಈ ಬಗ್ಗೆ ಬಹಳ ಚೆನ್ನಾಗಿ ಗೊತ್ತಿದೆ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸ್ಟಾಂಡರ್ಡ್ ರಾಜಕಾರಣಿ. ಕಣ್ಣೀರು ಹಾಕಿಸುವಂತಹ ಕೆಲಸ ಅವರು ಮಾಡುವುದಿಲ್ಲ. ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ನ ಯಾರೂ ಕಿರುಕುಳ ಕೊಟ್ಟಿರಲಿಲ್ಲ. ಅವರ ಆಡಳಿತದಲ್ಲೂ ಹಸ್ತಕ್ಷೇಪ ಮಾಡಿರಲಿಲ್ಲ. ಆ ಬಗ್ಗೆ ಒಂದು ಪ್ರಕರಣ ಇದ್ದರೆ ತಿಳಿಸಲಿ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿಯವರ ತಪ್ಪಿನಿಂದಾಗಿಯೇ ಸರ್ಕಾರ ಪತನವಾಗಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣಕ್ಕಾಗಿ ಸರ್ಕಾರ ಹೋಯಿತು. ಇದಕ್ಕೆ ಸಿದ್ದರಾಮಯ್ಯ ಅವರನ್ನು ಹೊಣೆ ಮಾಡುವುದು ಸರಿಯಲ್ಲ ಎಂದರು.
ಐಎಂಎ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಾನು ಮೊದಲಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇನೆ. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಬಿಐಗೆ ಕೊಡಲು ನಿರ್ಧಾರ ಮಾಡಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ ಮತ್ತು ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ. ಬಡವರ ದುಡ್ಡು ತಿಂದವರು ಬಯಲಿಗೆ ಬರಬೇಕು ಎಂದರು.
ಜಮೀರ್ ಅಹಮ್ಮದ್ ಖಾನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಯಾರಾದರೂ ಹೇಳಿದರೆ ಅದು ಸಾಧ್ಯವಿಲ್ಲ. ಕುಮಾರಸ್ವಾಮಿಯವರು ಈ ರೀತಿ ಹೇಳಿದರೆ ಅದಕ್ಕೆ ಸೂಕ್ತಕಾಲದಲ್ಲಿ ಉತ್ತರ ಕೊಡುತ್ತೇನೆ ಎಂದರು.