ಜಮ್ಮು, ಆ.23-ಭಾರತೀಯ ಸಂವಿಧಾನದ 370ನೇ ವಿಧಿ ರದ್ದತಿ ನಂತರ ಕಾಶ್ಮೀರ ಕಣಿವೆ ಪ್ರಾಂತ್ಯದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಬಳಿ ಪಾಕಿಸ್ತಾನಿ ಸೇನೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದು, ಕೆಲವರು ಗಾಯಗೊಂಡಿದ್ಧಾರೆ.
ನೌಶೆರಾ ವಲಯದ ಕಾಲ್ಸಿಯಾ ಗ್ರಾಮದ ಮುಂಚೂನಿ ನೆಲೆಯಲ್ಲಿ ಪಹರೆ ಕಾಯುತ್ತಿದ್ದ ಯೋಧರೊಬ್ಬರು ಇಂದು ಮುಂಜಾನೆ ಪಾಕ್ ರೇಂಜರ್ಗಳ ಅಪ್ರೇರಿತ ಗುಂಡಿನ ದಾಳಿಯಿಂದ ಮೃತಪಟ್ಟರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತೀಯ ಯೋಧರೂ ಕೂಡ ದಿಟ್ಟ ಪ್ರತ್ಯುತ್ತರ ದಾಳಿ ನಡೆಸಿದ್ದು ಪಾಕಿಸ್ತಾನ ಕಡೆ ಸಾವುನೋವು ಆಗಿರುವ ಸಾಧ್ಯತೆಯೂ ಇದೆ.
ಕಳೆದ ಒಂದು ವಾರದಲ್ಲಿ ರಜೌರಿ ಮತ್ತು ಪೂಂಚ್ ಅವಳಿ ಜಿಲ್ಲೆಗಳಲ್ಲಿ ಪಾಕಿಸ್ತಾನ ಯುದ್ದ ವಿರಾಮ ಉಲ್ಲಂಘಿಸಿ ನಡೆಸಿದ ಪುಂಡಾಟದಲ್ಲಿ ಈವರೆಗೆ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.