ಕೇಂದ್ರ ಗುಪ್ತಚರ ವಿಭಾಗ ಮಾಹಿತಿ ಹಿನ್ನೆಲೆ ತಮಿಳುನಾಡಿನಾದ್ಯಂತ ಹೈಅಲರ್ಟ್

ಚೆನ್ನೈ, ಆ.23-ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರಗಾಮಿ ಸಂಘಟನೆಯ ಆರು ಉಗ್ರರು ರಾಜ್ಯದೊಳಗೆ ಒಳನುಸುಳಿದ್ದಾರೆ ಎಂದು ಕೇಂದ್ರ ಗುಪ್ತಚರ ವಿಭಾಗ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಹೈಅಲರ್ಟ್ ಘೋಷಿಸಿದೆ.

ಪಾಕಿಸ್ತಾನ ಮೂಲದ ಇಲಿಯಾಸ್ ಅನ್ವರ್ ಎಂಬ ಉಗ್ರನ ಜೊತೆ ಶ್ರೀಲಂಕಾ ರಾಜಧಾನಿ ಕೊಲಂಬೋದಿಂದ ಉಗ್ರರು ಬಂದಿರುವ ಸಾಧ್ಯತೆ ಇದೆ. ಇವರೆಲ್ಲರೂ ಹಣೆಗೆ ವಿಭೂತಿ ಮತ್ತು ತಿಲಕ ಧರಿಸಿದ್ದು, ಕಟ್ಟಾ ಹಿಂದೂಗಳ ರೀತಿ ವರ್ತಿಸುತ್ತಾರೆ ಎಂದು ಎಚ್ಚರಿಸಿದೆ.

ಪಾಕಿಸ್ತಾನದಿಂದ ಓರ್ವ ಹಾಗೂ ಶ್ರೀಲಂಕಾದಿಂದ 5 ಮಂದಿ ಉಗ್ರರು ಸಮುದ್ರ ಮಾರ್ಗದ ಮೂಲಕ ತಮಿಳುನಾಡಿನ ಕೊಯಂಮತ್ತೂರು ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಒಳನುಸುಳಿ ದುಷ್ಕøತ್ಯ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಬಂದರು, ಜನನಿಬಿಡ ಪ್ರದೇಶಗಳು, ಹೈಕೋರ್ಟ್ , ವಿಧಾನಸೌಧ, ರಾಜಭವನ, ಮಾಲ್‍ಗಳು ಸೇರಿದಂತೆ ಮತ್ತಿತರ ಕಡೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.

ವಿಶೇಷವಾಗಿ ಕರಾವಳಿ ತೀರ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಚೆಕ್‍ಪೋಸ್ಟ್, ಬಂದರು ಹಾಗೂ ಇಲ್ಲಿಂದ ಹೊರ ಹೋಗುವ ಹಾಗೂ ಸ್ವದೇಶಕ್ಕೆ ಆಗಮಿಸುವ ಹಡಗುಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ.

ಯಾವುದೇ ಸಂದರ್ಭದಲ್ಲೂ ಉಗ್ರರು ಯಾವುದೇ ರೀತಿಯ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಬಿಗಿ ಭದ್ರತೆ ಕೈಗೊಂಡು ಸಂಭಾವ್ಯ ದಾಳಿಯನ್ನು ತಡೆಯಬೇಕೆಂದು ನಿರ್ದೇಶಿಸಲಾಗಿದೆ.

ಕೇಂದ್ರಗುಪ್ತಚರ ವಿಭಾಗದ ಅಧಿಕಾರಿಗಳೇ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಸರ್ಪಗಾವಲು ಹಾಕಲಾಗಿದೆ.

ಪ್ರತಿಯೊಂದು ವಾಹನಗಳು, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಯಾವುದೇ ಸಂದರ್ಭವನ್ನು ಎದುರಿಸಲು ಸನ್ನದ್ಧವಾಗಿರುವಂತೆ ಪೊಲೀಸರಿಗೆ ಸರ್ಕಾರ ಸೂಚಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ