ಎಲ್ಲಾ ತಂತ್ರ-ಕುತಂತ್ರ ಗೊತ್ತಿದೆ: ದೇವೇಗೌಡರ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನ್ನ ಮೇಲೆ ಗಂಭೀರವಾಗಿ ಆರೋಪ ಹೊರಿಸಿದ್ದಾರೆ. ಹೀಗಾಗಿ ನಾನು ಮೌನವಾಗಿದ್ದರೆ ಅದು ತಪ್ಪು ಕಲ್ಪನೆಗೆ ಅವಕಾಶ ಮಾಡಿಕೊಡುತ್ತದೆ ಎಂಬ ನಿಟ್ಟಿನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಮ್ಮಿಶ್ರ ಸರಕಾರ ಪತನಕ್ಕೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರೇ ಕಾರಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಂಗ್ಲಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಿಕೊಳ್ಳಲಾರದೆ…ಸರಕಾರ ಬೀಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಸ್ವಾಯತ್ತೆ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಹೋರಾಡಬೇಕು ಎಂಬ ದೃಷ್ಟಿಯಲ್ಲಿ ಸರಕಾರ ರಚನೆಗೆ ಒಪ್ಪಿದ್ದೆ. ಆದರೆ ನಾನೇನು ಕುಮಾರಸ್ವಾಮಿ ಸಿಎಂ ಆಗಬಾರದು ಎಂದು ಭಾವಿಸಿಲ್ಲ. ನಾನು 14 ತಿಂಗಳ ಕಾಲ ಸಂಪೂರ್ಣ ಸಹಕಾರ ನೀಡಿದ್ದೆ.

ಆದರೆ ದೇವೇಗೌಡರ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು. ರಾಜಕೀಯ ದುರುದ್ದೇಶದಿಂದ ಮಾಡಿರುವಂತಹ ಸುಳ್ಳು ಆರೋಪವಾಗಿದೆ ಎಂದರು. ನನಗೆ, ಅವರಿಗೆ ರಾಜಕೀಯ ವೈರತ್ವ ಎಂದು ತಿಳಿದಿದ್ದಾರೆ. ನಮ್ಮ ಹೈಕಮಾಂಡ್ ತೀರ್ಮಾನವನ್ನು ನಾನು ಒಪ್ಪಿದ್ದೆ. ನಾನು ಅವರ ಕೆಲಸದಲ್ಲಿ ಯಾವ ಹಸ್ತಕ್ಷೇಪವನ್ನೂ ಮಾಡಿಲ್ಲ. ಇವರ ತಪ್ಪು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಗುಡುಗಿದ್ದಾರೆ.

ಸಮ್ಮಿಶ್ರ ಸರಕಾರ ಪತನಕ್ಕೆ ನಾನು ಕಾರಣನಲ್ಲ:

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ ಪತನಕ್ಕೆ ರೇವಣ್ಣ, ಕುಮಾರಸ್ವಾಮಿ ಕಾರಣ ಎಂದು ಎಲ್ಲರು ಆರೋಪಿಸಿದ್ದಾರೆ. ಮೈತ್ರಿ ಸರಕಾರ ಪತನಕ್ಕೆ ದಳಪತಿಗಳೇ ಕಾರಣ ವಿನಃ, ನಾವಲ್ಲ ಎಂದರು.

ಇವರ ಏಕಪಕ್ಷೀಯ ನಿರ್ಧಾರ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಸರಕಾರ ಪತನಕ್ಕೆ ಕಾರಣವಾಯಿತು. ನಮ್ಮ ಸರಕಾರ ಉಳಿಯಬೇಕು ಎಂದು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ಇವರ ಉದ್ದೇಶ ನನಗೆ ಗೊತ್ತಿಲ್ಲ. ನನ್ನ ಮೇಲೆ ಆರೋಪ ಮಾಡಿ ಯಾವ ಪಕ್ಷವನ್ನು ಖುಷಿಪಡಿಸಲು ಹೊರಟಿದ್ದಾರೋ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಬೇಕೆಂಬ ಇಚ್ಛೆಯಿಂದ ಯಡಿಯೂರಪ್ಪ ಜೊತೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೇಶದ ರಾಜಕೀಯದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಾಗಲು ಸರಕಾರ ಬೀಳಿಸಿದ ಚರಿತ್ರೆ ಇಲ್ಲ ಎಂದು ತಿರುಗೇಟು ನೀಡಿದರು.

ನಾವು ಐದಾರು ಸಮನ್ವಯ ಸಮಿತಿ ಸಭೆಗಳನ್ನು ಮಾಡಿದ್ದೇವು. ಆದರೆ ಅದನ್ನು ಕುಮಾರಸ್ವಾಮಿ ಜಾರಿಗೊಳಿಸಿಲ್ಲ. ಸಮನ್ವಯ ಸಮಿತಿ ನಿರ್ಧಾರ ಜಾರಿಗೊಳಿಸದೇ ಇದ್ದದ್ದು ಅವರ ತಪ್ಪು. ನಾನು ಸರಕಾರ ಬೀಳಿಸುವ ನೀಚ ರಾಜಕಾರಣ ಮಾಡಲ್ಲ. ದೇವೇಗೌಡರು ಬೇರೆ ಸರಕಾರ ಉರುಳಿಸೋದು ಅವರ ಹುಟ್ಟುಗುಣ. ಧರಂ ಸಿಂಗ್ ಗೆ ಬೆಂಬಲ ಕೊಟ್ಟರು, ನಂತರ ಸರಕಾರ ಬೀಳಿಸಿದವರು ಯಾರು? ಬೊಮ್ಮಾಯಿ ಸರಕಾರ ಬೀಳಿಸಿದವರು ಯಾರು? ಇವತ್ತು ಏನಾದರು ಬಿಜೆಪಿ ಅಧಿಕಾರಕ್ಕೆ ಬರಲು ದೇವೇಗೌಡರು ಮತ್ತು ಕುಮಾರಸ್ವಾಮಿ ಕಾರಣ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

ದ್ರೋಹ ಎಸಗುವುದು ದೇವೇಗೌಡರ ಹುಟ್ಟುಗುಣ!

ನಾನು ಯಾವತ್ತೂ ಅಧಿಕಾರದ ಹಿಂದೆ ಬಿದ್ದಿಲ್ಲ. ರಾತ್ರೋರಾತ್ರಿ ಬಿಜೆಪಿ ಕ್ಯಾಂಪ್ ಸೇರಿಕೊಂಡುವರು ಯಾರು?ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಜೆಡಿಎಸ್ ನವರೇ ಕಾರಣ. 20;20 ತಿಂಗಳ ಅಧಿಕಾರ ಹಂಚಿಕೆಯಲ್ಲಿ ಕೊಟ್ಟ ಮಾತನ್ನು ತಪ್ಪಿ ವಚನಭ್ರಷ್ಟರಾದವರು ಯಾರು? ಇವರಿಗೆ ಯಾವ ಪಕ್ಷ ಬೆಂಬಲ ಕೊಡುತ್ತೋ ಆ ಪಕ್ಷದ ಬೆಂಬಲ ವಾಪಸ್ ಪಡೆಯುವುದೇ ದೇವೇಗೌಡ ಮತ್ತು ಮಕ್ಕಳ ಹುಟ್ಟುಗುಣ ಎಂದು ಗುಡುಗಿದರು.

ಸೀತಾರಾಮ ಕೇಸರಿಗೆ ಏನು ಮಾಡಿದ್ದರು ದೇವೇಗೌಡರು ಗೊತ್ತಾ? ವಚನ ಭ್ರಷ್ಟತೇ ದೇವೇಗೌಡರ ಇತಿಹಾಸದಲ್ಲಿಯೇ ಇದೆ. ಇವರು ಎಷ್ಟೇ ನಾಟಕವಾಡಿದರೂ ಅದನ್ನು ಜನ ಮರೆಯುವುದಿಲ್ಲ. ಇವರ ಕುತಂತ್ರ, ಹುನ್ನಾರ, ಸಂಚುಗಳು ನನಗೇನು ಗೊತ್ತಿಲ್ಲವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಹಿಂದೆ ನನಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದು ಕುಮಾರಸ್ವಾಮಿಯೇ ಎಂದು ಶರದ್ ಪವಾರ್ ಮನೆಯಲ್ಲಿ ನಡೆದ ಮಾತುಕತೆಯಲ್ಲಿ ಒಪ್ಪಿಕೊಂಡಿದ್ದರು.

ಲೋಕಸಭೆ ಚುನಾವಣೆಯಲ್ಲಿ ಫ್ರೆಂಡ್ಲಿ ಹೋರಾಟದ ಬಗ್ಗೆ ಒಪ್ಪಿಕೊಂಡಿದ್ದು ನಿಜ.  ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಲು, ತುಮಕೂರಿನಲ್ಲಿ ದೇವೇಗೌಡರು ಸೋಲಲು ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದ್ದಾರೆ. ನಾನು ಹಾಸನಕ್ಕೂ ಪ್ರಚಾರಕ್ಕೆ ಹೋಗಿದ್ದೆ, ಅಲ್ಲಿ ದೇವೇಗೌಡರ ಮೊಮ್ಮಗ ಗೆದ್ದಿದ್ದಾರಲ್ಲ? ನನಗೆ ಹಿಂದೊಂದು, ಮುಂದೊಂದು ರೀತಿ ರಾಜಕಾರಣ ಮಾಡಿ ಗೊತ್ತಿಲ್ಲ. ನಾನು ಏನಿದ್ದರೂ ನೇರ ರಾಜಕಾರಣ ಮಾಡುವವನು.

ದೇವೇಗೌಡರು ಸ್ವಜಾತಿಯವರನ್ನು, ತಮ್ಮ ಕುಟುಂಬದವನ್ನು ಬಿಟ್ಟು ಪಕ್ಷದಲ್ಲಿ ಬೇರೆ ಯಾರನ್ನೂ ಬೆಳೆಸುವುದಿಲ್ಲ. ಗೌಡರ ಕುಟುಂಬ ರಾಜಕಾರಣದಿಂದ ಬೇಸತ್ತು ಜನರೇ ಸೋಲಿಸಿದ್ದಾರೆ. ಅನಾವಶ್ಯಕವಾಗಿ ನನ್ನ ಮೇಲೆ ಆರೋಪ ಹೊರಿಸಿದರೆ ಏನು ಲಾಭ. ರಾಜ್ಯ ಜನ ನನ್ನ ಇತಿಹಾಸವನ್ನೂ ನೋಡಿದ್ದಾರೆ, ಇವರ ರಾಜಕೀಯ ಇತಿಹಾಸದ ನಡವಳಿಕೆ ನೋಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ