ಬೆಂಗಳೂರು, ಆ.21- ದೇಶ ಕಾಯುವ ಸೈನಿಕರು ಹಾಗೂ ಅನ್ನ ನೀಡುವ ರೈತರ ಸೇವೆ ಅನನ್ಯವಾಗಿದ್ದು, ಇವರಿಗೆ ಪ್ರತಿಯೊಬ್ಬರು ಗೌರವ ಸಲ್ಲಿಸಬೇಕು ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ತಿಳಿಸಿದ್ದಾರೆ.
ಕೆಂಗೇರಿ ಹೋಬಳಿಯ ಅಗರ ಗ್ರಾಮದ ಸಾಹಿತ್ಯ ರತ್ನ ಆರ್.ಸದಾಶಿವಯ್ಯ ಕಲಾಮಂಟಪದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಸಂಸ್ಕøತಿ ವೇದಿಕೆಯ 44ನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಬ್ಬಗಳನ್ನು ಅಂದೇ ಆಚರಿಸಬೇಕು.ಬೇರೆ ದಿನ ಆಚರಿಸುವುದು ಸೂಕ್ತವಲ್ಲ. ಯೋಧರು ಹಾಗೂ ರೈತರ ಸೇವೆ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರ ನಿಸ್ವಾರ್ಥ ಸೇವೆಯಿಂದ ಇಂದು ನಾವು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ಎಂದರು.
ಸೈನಿಕರು ತಮ್ಮವರನ್ನೆಲ್ಲಾ ಬಿಟ್ಟು ಗಾಳಿ, ಮಳೆ, ಬಿಸಿಲು ಎನ್ನದೆ ನಮ್ಮ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಾರೆ.ಇಂತಹ ಸೈನಿಕರ ಸೇವೆಗೆ ನಾವು ಆಬಾರಿಯಾಗಿರಬೇಕು. ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಮಹಿಳೆಯರು ಅಂಜದೆ, ಅಳುಕದೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ಗುರುತಿಸಿಕೊಳ್ಳಬೇಕು.ಪ್ರಸ್ತುತದಲ್ಲಿ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆಗೈದಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಮಾಜದ ಮುನ್ನುಡಿಗೆ ಬಂದು ಸಾಧನೆಯತ್ತ ಗಮನ ಹರಿಸಬೇಕು ಎಂದರು.
ನಿವೃತ್ತ ಯೋಧ ಹಾಗೂ ವೀರಶೈವ ಕೋ ಆಪರೇಟಿವ್ ಬ್ಯಾಂಕ್‍ನ ನಿರ್ದೇಶಕರಾದ ಬಿ.ಎಸ್.ಪ್ರಭುದೇವ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಸೈನಿಕ ವೃತ್ತಿ ಹೆಮ್ಮೆಯ ವೃತ್ತಿಯಾಗಿದ್ದು, ಈ ನಿಟ್ಟಿನಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು. ಸೇನೆಯಲ್ಲಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ನಿವೃತ್ತ ಯೋಧರಾದ ವಿ.ಸಿ.ಪ್ರಕಾಶ್, ಮರಿಬಸಪ್ಪ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷರಾದ ಆರ್.ಸದಾಶಿವಯ್ಯ ಜರಗನಹಳ್ಳಿ , ಸುರೇಶ್, ದಯಾನಂದ್, ಸುವರ್ಣ ತಿಪ್ಪೇಸ್ವಾಮಿ ಸೇರಿದಂತೆ ವೇದಿಕೆಯ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.