ಕೆಆರ್ ಪುರ, ಆ.21-ಅಧಿಕಾರ ಇರಲಿ, ಇಲ್ಲದಿರಲಿ ಸಾರ್ವಜನಿಕರ ಸೇವೆ ಮಾತ್ರ ನಿಲ್ಲಿಸುವುದಿಲ್ಲ ಎಂದು ಮಾಜಿ ಶಾಸಕ ಬೈರತಿ ಬಸವರಾಜ ಇಂದಿಲ್ಲಿ ತಿಳಿಸಿದರು.
ಬಸವನಪುರ ವಾರ್ಡ್ನ ಶೀಗೇಹಳ್ಳಿಯಲ್ಲಿ ಗೌರಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಅರಿಶಿನ-ಕುಂಕುಮ, ಬಳೆ, ಸೀರೆ ವಿತರಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಕೆಆರ್ ಪುರ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದುಕೊಂಡು ಅವರಿಗೆಅವಶ್ಯಕ ಕೆಲಸಗಳನ್ನು ಮಾಡುತ್ತ ಬಂದಿದ್ದೇನೆ ಎಂದರು.
ನಾನು ಯಾವುದೇ ಪಕ್ಷದಲ್ಲಿರಲಿ ಸೇವೆ ಮಾತ್ರ ನಿಲ್ಲಿಸಲ್ಲ. ವ್ಯಕ್ತಿ ನೋಡಿ, ಪಕ್ಷ ನೋಡಬೇಡಿ. ಅಭಿವೃದ್ಧಿಗೋಸ್ಕರ ಅಧಿಕಾರ ತ್ಯಾಗ ಮಾಡಿದವನು. ಜನರ ಸೇವೆಯೇ ನಮಗೆ ಮುಖ್ಯ ಎಂದರು.
ಮಹಿಳೆಯರಿಗೆ ಪ್ರತಿ ವರ್ಷ ಗೌರಿ ಹಬ್ಬಕ್ಕೆ ಅರಿಶಿನ-ಕುಂಕುಮ ಬಳೆ ಜತೆಗೆ ಸೀರೆ ಕೊಡುವ ಕೆಲಸ ಮಾಡುತ್ತ ಬಂದಿದ್ದೇನೆ. ಇದು ಪ್ರತಿವರ್ಷ ಮುಂದುವರೆಯುತ್ತದೆ ಎಂದು ಹೇಳಿದರು.
ಕಾರ್ಯಕರ್ತರು, ಮುಖಂಡರು ಯಾವುದೇ ಸುಳ್ಳು ಮಾತುಗಳಿಗೆ ಬೆರಗಾಗಬೇಡಿ.ನನ್ನನ್ನು ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದು ತಿಳಿಸಿದರು.
ಪಾಲಿಕೆ ಸದಸ್ಯರಾದ ಜಯಪ್ರಕಾಶ್, ಶ್ರೀಕಾಂತ್, ಉದಯ್ಕುಮಾರ್, ರಂಗಸ್ವಾಮಿ, ಮೇಡಹಳ್ಳಿ ಜಗ್ಗಿ, ಕರೀಂ ಪಾಷ, ತಿರುಮಲರೆಡ್ಡಿ, ನವೀನ್ ಮತ್ತಿತರರಿದ್ದರು.