ಬೆಂಗಳೂರು, ಆ.21- ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಂಡು ಹೋಗಿ. ಕೆಲಸ ಮಾಡಲು ಕಷ್ಟ ಎನಿಸಿದರೆ ವರ್ಗಾವಣೆ ಮಾಡಿಸಿಕೊಂಡು ಬೇರೆ ಕಡೆ ಹೋಗಿ ಬಿಡಿ ಎಂದು ಮೇಯರ್ ಗಂಗಾಂಬಿಕೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ಗಳಿಗೆ ತರಾಟೆಗೆ ತೆಗೆದುಕೊಂಡರು.
ಪೂರ್ವ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳು, ಹೂಳೆತ್ತಿರುವ ಮಣ್ಣು ರಾಶಿ(ಡೆಬ್ರಿಸ್), ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಇಂದು ಹಮ್ಮಿಕೊಂಡಿದ್ದ ಪೂರ್ವ ವಲಯ ಜಂಟಿ ಆಯುಕ್ತರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳು ಒಂದು ವಾರ್ಡ್ಗೆ ಮಾತ್ರ ಪ್ರತಿನಿಧಿಸುತ್ತೀರ. ಯಾವುದೇ ಸಬೂಬು ನೀಡದೆ ತಮ್ಮ ತಮ್ಮ ಜವಾಬ್ದಾರಿಯನ್ನು ಶಿಸ್ತಿನಿಂದ ನಿರ್ವಹಿಸಬೇಕು.ಇಲ್ಲವಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ರಸ್ತೆಗಳನ್ನು ಸ್ವಚ್ಛವಾಗಿಡುವುದು ಪಾಲಿಕೆಯ ಜವಾಬ್ದಾರಿಯಾಗಿದೆ. ಈ ಸಂಬಂಧ ವಾರ್ಡ್ಗಳಲ್ಲಿ ಯಾವ್ಯಾವ ಸಮಸ್ಯೆಗಳಿವೆ ಎಂಬುದನ್ನು ಪಟ್ಟಿ ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಮಾಹಿತಿ ನೀಡಿ ತ್ವರಿತಗತಿಯಲ್ಲಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಎಲ್ಲ ಅಧಿಕಾರಿಗಳು ಅವರ ಕೆಲಸ ಏನೆಂಬುದನ್ನು ಅರಿತು ಶಿಸ್ತಿನಿಂದ ಕೆಲಸ ಮಾಡಿಕೊಂಡು ಹೋಗಬೇಕು. ಬೇಜವಾಬ್ದಾರಿತನ ಮಾಡಿದರೆ ಸಹಿಸುವುದಿಲ್ಲ ಎಂದು ಹೇಳಿದರು.
ಮುಖ್ಯರಸ್ತೆ ಹಾಗೂ ವಾರ್ಡ್ ರಸ್ತೆಗಳಲ್ಲಿ ಕಾಮಗಾರಿಗಳು ನಡೆಯುವ ವೇಳೆ ಬ್ಯಾರಿಕೇಡ್ಗಳನ್ನು ಅಳವಡಿಸದೆ ಇದ್ದರೆ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಕಡ್ಡಾಯವಾಗಿ ಬ್ಯಾರಿಕೇಡ್ಗಳನ್ನು ಅಳವಡಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಸೂಚಿಸಿದರು.
ಮುಖ್ಯರಸ್ತೆಗಳಲ್ಲಿ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಂತಿರುವ ನೀರು ಸರಾಗವಾಗಿ ಹರಿಯಲು ಬೇಕಾದ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಸ್ಲ್ಯಾಬ್ ಹಾಳಾಗಿದ್ದರೆ ಅದನ್ನು ಕೂಡಲೆ ಸರಿಪಡಿಸಬೇಕು ಎಂದು ಮೇಯರ್ ಆದೇಶಿಸಿದರು.
ಪಾಲಿಕೆ ಪ್ರಧಾನ ಅಭಿಯಂತರ ಎಂ.ಆರ್.ವೆಂಕಟೇಶ್ ಮಾತನಾಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಳು ವಾರ್ಡ್ ಗಳಲ್ಲಿ ಏನೆಲ್ಲ ಕ್ರಮಗಳು ಕೈಗೊಂಡಿದ್ದೀರಾ ಎಂಬ ವರದಿಯನ್ನು ಪ್ರತೀ ತಿಂಗಳು ಸಲ್ಲಿಸಬೇಕು ಎಂದು ತಿಳಿಸಿದರು.
ಪರಿಶೀಲನೆ ವೇಳೆ ಅವೈಜ್ಞಾನಿಕವಾಗಿ ಗುಂಡಿಗಳು ಮುಚ್ಚಿರುವುದು ಕಂಡುಬಂದರೆ ಎಇಇ, ಎಇಗಳಿಗೆ ಒಂದು ಗುಂಡಿಗೆ 1,000ರೂ.ನಂತೆ ಎಷ್ಟು ಗುಂಡಿಗಳು ಅವೈಜ್ಞಾನಿಕವಾಗಿ ವೆಯೋ ಅಷ್ಟೂ ದಂಡ ವಿಧಿಸಿ ಅವರ ವೇತನದಲ್ಲಿ ದಂಡದ ಮೊತ್ತ ಪಡೆದು ಉಳಿದ ವೇತನವನ್ನು ಅವರ ಖಾತೆಗೆ ಜಮೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಎಫ್ಸಿ ಕೇಬಲ್ ತೆರವು ಮಾಡಿ: ವಾರ್ಡ್ಗಳಲ್ಲಿ ಮರ, ಮೇಲ್ಸೇತುವೆ, ಕೆಳಸೇತುವೆ, ವಿದ್ಯುತ್ ಕಂಬಗಳ ಮೂಲಕ ಆದು ಹೋಗಿರುವ ಒಎಫ್ಸಿ ಕೇಬಲ್ಗಳನ್ನು ಇಂದಿನಿಂದಲೇ ತೆರವು ಮಾಡಲು ಕ್ರಮ ವಹಿಸಬೇಕು. ಅವಶ್ಯಕತೆಯಿರುವ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ತೆರವು ಕಾರ್ಯಾಚರಣೆ ಪ್ರಾರಂಭಿಸಿ ಎಂದು ಮೇಯರ್ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.
ಸಭೆಯಲ್ಲಿ ಉಪಮೇಯರ್ ಭದ್ರೇಗೌಡ, ಆಡಳಿತ ಮತ್ತು ಜೆಡಿಎಸ್ ನಾಯಕರು, ಪಾಲಿಕೆ ಪ್ರಧಾನ ಅಭಿಯಂತರರು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.