ಬೆಂಗಳೂರು, ಆ.21-ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದ್ದರೂ ಪಿಒಪಿ ಗಣೇಶಮೂರ್ತಿಗಳ ಹಾವಳಿ ನಗರದಲ್ಲಿ ಹೆಚ್ಚಾಗಿದೆ.
ಇಂದು ಪಿಒಪಿ ಗಣೇಶಮೂರ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆರೋಗ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ವ್ಯಾಪಾರಿಗಳು ತೀವ್ರ ಅಡ್ಡಿಪಡಿಸಿ ವಾಗ್ವಾದ ನಡೆಸಿದರು.
ಕೆಲವರು ಕೇಸರಿ ಬಾವುಟ ಹಿಡಿದ ನಮ್ಮ ಗಣೇಶ ಮೂರ್ತಿಗಳನ್ನು ಮುಟ್ಟ ಬೇಡಿ ಎಂದು ಗಲಾಟೆ ಎಬ್ಬಿಸಿದರು. ಮಾರಾಟಗಾರರ ಗಲಾಟೆ ಮಿತಿಮೀರಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಪೊಲೀಸರ ನೆರವಿಗೆ ಮೊರೆ ಹೋದರು.
ತಕ್ಷಣ ಬೆಂಗಳೂರು ದಕ್ಷಿಣ ವಲಯದ ಜಾಯಿಂಟ್ ಕಮಿಷನರ್ ವೀರಭದ್ರಸ್ವಾಮಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವ್ಯಾಪಾರಿಗಳನ್ನು ಸಮಾಧಾನ ಪಡಿಸಲು ಯತ್ನಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವೀರಭದ್ರಸ್ವಾಮಿಯ ಅವರು 216 ಪಿಒಪಿ ಗಣೇಶಮೂರ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಸದ್ಯಕ್ಕೆ ಗೋಡೌನ್ನಲ್ಲಿ ಇಡುತ್ತೇವೆ. ಆಯುಕ್ತರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.