ಬೆಂಗಳೂರು,ಆ.21-ಕೆಲವು ಶಾಸಕರು ಸಂಪುಟದಲ್ಲಿ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯದಲ್ಲೇ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಗೆ ಕೈ ಹಾಕಲಿದ್ದಾರೆ.
ಮೊದಲಿನ ಸುತ್ತಿನಲ್ಲಿ ಯಾವ ಯಾವ ಶಾಸಕರಿಗೆ ಮಂತ್ರಿ ಸ್ಥಾನ ಕೈತಪ್ಪಿದೆಯೋ ಅಂಥವರನ್ನು ಗುರುತಿಸಿ 5 ರಿಂದ 6 ಮಂದಿ ಶಾಸಕರಿಗೆ ಸಂಪುಟದಲ್ಲಿ ಸ್ಥಾನಮಾನ ಕಲ್ಪಿಸುವ ಮೂಲಕ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನವನ್ನು ಶಮನಗೊಳಿಸಲು ಬಿಎಸ್ವೈ ಮುಂದಾಗಿದ್ದಾರೆ.
ಎರಡನೇ ಹಂತದ ಸಂಪುಟ ವಿಸ್ತರಣೆಗೆ ಕೇಂದ್ರವರಿಷ್ಠರೂ ಕೂಡ ಒಲವು ತೋರಿದ್ದು, ಸಮಯ ಹಾಗೂ ಸಂದರ್ಭ ನೋಡಿಕೊಂಡು ವಿಸ್ತರಣೆ ಮಾಡುವಂತೆ ಸಲಹೆ ಕೊಟ್ಟಿದ್ದಾರೆ.
ಮೂಲಗಳ ಪ್ರಕಾರ ಒಂದು ತಿಂಗಳ ನಂತರ ಎರಡನೇ ಹಂತದ ಸಂಪುಟ ವಿಸ್ತರಣೆಯಾಗಲಿದ್ದು, ಶಾಸಕರಾದ ಉಮೇಶ್ ಕತ್ತಿ, ಎಂ.ಪಿ.ರೇಣುಕಾಚಾರ್ಯ, ಬಾಲಚಂದ್ರಜಾರಕಿಹೊಳಿ, ತಿಪ್ಪಾರೆಡ್ಡಿ, ರಾಜೂಗೌಡ ನಾಯಕ್, ಇಲ್ಲವೆ ದಕ್ಷಿಣ ಕನ್ನಡದ ಎಸ್.ಅಂಗಾರ ಅವರುಗಳನ್ನು ಸಂಪುಟಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.
ಕರಾವಳಿ ಭಾಗದಿಂದ ಕುಂದಾಪುರದ ಹಾಲಾಡಿ ಶ್ರೀನಿವಾಸಶೆಟ್ಟಿ, ಇಲ್ಲವೆ ಎಸ್.ಅಂಗಾರ ಅವರುಗಳಿಗೆ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಈಗಾಗಲೇ ದಕ್ಷಿಣ ಕನ್ನಡದ ನಳೀನ್ಕುಮಾರ್ ಕಟೀಲ್ಗೆ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ಈ ಭಾಗಕ್ಕೆ ಮಂತ್ರಿ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ.
ಅಸಮಾಧಾನಗೊಂಡಿರುವ ಶಾಸಕರು ಮುಂದೊಂದು ದಿನ ಪಕ್ಷಕ್ಕೆ ಮುಳುವಾಗಬಹುದೆಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಎರಡನೇ ಹಂತದ ವಿಸ್ತರಣೆಗೆ ಹೈಕಮಾಂಡ್ ಒಲ್ಲದ ಮನಸ್ಸಿನಿಂದಲೇ ಹಸಿರು ನಿಶಾನೆ ತೋರಿದೆ.
ವಿಧಾನಸಭೆಯಲ್ಲೂ ಬಿಜೆಪಿ ಮೊದಲೇ ಸಂಪೂರ್ಣ ಬಹುಮತ ಹೊಂದಿಲ್ಲ. 17 ಮಂದಿ ಶಾಸಕರು ಅನರ್ಹಗೊಂಡಿರುವುದರಿಂದ ಸದ್ಯಕ್ಕೆ ಬಿಜೆಪಿಗೆ ವಿಧಾನಸಭೆಯಲ್ಲಿ ಸರಳ ಬಹುಮತವಿದೆ. ಒಂದು ವೇಳೆ ನಾಳೆ ಸುಪ್ರೀಂಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದರೆ ಮತ್ತೆ ಯಡಿಯೂರಪ್ಪನವರಿಗೆ ತೊಳಲಾಟ ತಪ್ಪಿದ್ದಲ್ಲ.
ಹೀಗಾಗಿ ಅಸಮಾಧಾನಗೊಂಡಿರುವ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂತ್ರಿ ಸ್ಥಾನ ಕಲ್ಪಿಸಲು ಬಿಎಸ್ವೈ ಮುಂದಾಗಿದ್ದಾರೆ. ಈ ಮೂಲಕ ಪಕ್ಷ ಮತ್ತು ಸರ್ಕಾರದ ನಡುವೆ ಯಾವುದೇ ರೀತಿಯ ಗೊಂದಲ ಹಾಗೂ ಅಸಮಾಧಾನದ ಸಣ್ಣ ಗೆರೆಯೂ ಇಲ್ಲದಂತೆ ಎಚ್ಚರಿಕೆ ಇಟ್ಟಿದ್ದಾರೆ.