ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಅವರನ್ನು ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಮೃದು ಹಿಂದೂವಾದಿ ಬಿಎಸ್ವೈ ಸಿಎಂ ಆಗಿದ್ದರೆ, ಕಟ್ಟರ್ ಹಿಂದೂತ್ವವಾದಿಯಾದ ಕಟೀಲ್ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಮುಂದೆ ಇವರಿಬ್ಬರ ನಡುವಿನ ಹೊಂದಾಣಿಕೆ ಹೇಗಿರಲಿದೆ ಎಂಬ ಪ್ರಶ್ನೆ ಮೂಡಿದೆ.
2016ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿಎಸ್ ಯಡಿಯೂರಪ್ಪ ಎಲ್ಲೂ ಕೂಡ ಹಿಂದೂತ್ವಕ್ಕೆ ಸೀಮಿತ ನಾಯಕರಾಗಿ ಬಿಂಬಿಸಿಕೊಂಡಿರಲಿಲ್ಲ.
ರೈತರು ಬಡವರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡ ಬಂದ ಅವರು, ಎಲ್ಲಾ ವರ್ಗದವರನ್ನು ಸರಿಸಮಾನರಾಗಿ ಕಾಣುತ್ತಿದ್ದರು. ಬಿಜೆಪಿಯಲ್ಲಿ ತಮ್ಮದೇ ಮೃದು ನಾಯಕತ್ವದ ಧೋರಣೆಯಿಂದಲೇ ಪಕ್ಷನ್ನು ಮತ್ತೊಮ್ಮೆ ಅಧಿಕಾರ ಚುಕ್ಕಾಣಿಗೆ ಹಿಡಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಆದರೆ, ಈಗ ಕಟ್ಟರ್ ಹಿಂದೂತ್ವವಾದಿ ಎಂದು ಗುರುತಿಸಿಕೊಂಡಿರುವ ಕಟೀಲ್ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆರ್.ಎಸ್.ಎಸ್, ವಿಶ್ವಹಿಂದೂ ಪರಿಷತ್ ತತ್ವಗಳನ್ನು ಚಾಚು ತಪ್ಪದೇ ಪರಿಪಾಲಿಸುವ ಕಟೀಲ್ ಈಗ ಎಲ್ಲ ಸಮುದಾಯವನ್ನು ಒಟ್ಟಿಗೆ ಮುನ್ನಡೆಸುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಕಟ್ಟರ್ ಹಿಂದೂತ್ವದ ಕಾರಣದಿಂದಲೇ ಮುಸ್ಲಿಂ ಸಮುದಾಯವನ್ನು ಸಮಾನವಾಗಿ ನೋಡದ ಹಿನ್ನೆಲೆ ಹಲವಾರು ಬಿಜೆಪಿ ನಾಯಕರ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಈ ವೇಳೆ ಮತ್ತೆ ಕಟ್ಟರ್ ಹಿಂದೂತ್ವವಾದಿ ನಾಯಕನ ಕೈಗೆ ಪಕ್ಷದ ಚುಕ್ಕಾಣಿ ನೀಡಿದರೆ, ಇದು ಸರ್ಕಾರ ಮತ್ತು ಪಕ್ಷದ ನಡುವೆ ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ ಎಂಬ ಮಾತು ಕೇಳಿ ಬಂದಿದೆ.
ಇನ್ನು ಮೂಲಗಳ ಪ್ರಕಾರ ಯುವಕರಿಗೆ ಆದ್ಯತೆ ಹೆಸರಿನಲ್ಲಿ ಸಂಘದ ಹಿಡಿತ ಸಾಧಿಸುವ ಸಲುವಾಗಿಯೇ ಕಟೀಲ್ಗೆ ಈ ಪಟ್ಟ ನೀಡಲಾಗಿದೆ ಎನ್ನಲಾಗಿದೆ. ಈಗಾಗಲೇ ದಕ್ಷಿಣಕನ್ನಡದಲ್ಲಿ ಹೆಚ್ಚಿರುವ ಹಿಂದೂತ್ವವಾದವನ್ನು ಇವರು ರಾಜ್ಯದಲ್ಲಿ ಪಸರಿಸಲಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಒಂದು ವೇಳೆ ಹಾಗಾದಲ್ಲಿ ಯಡಿಯೂರಪ್ಪ ಸರ್ಕಾರದ ಮೇಲೂ ಕಟೀಲ್ ಹಿಡಿತ ಸಾಧಿಸುವುದು ಸುಳ್ಳಲ್ಲ ಎಂದು ಹೇಳಲಾಗುತ್ತಿವೆ.