ಬೆಂಗಳೂರು,ಆ.20- ಸಚಿವರ ಪ್ರಮಾಣ ವಚನಕ್ಕೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹಲವು ಶಾಸಕರು ಪ್ರಮಾಣ ವಚನ ಸಮಾರಂಭಕ್ಕೆ ಗೈರಾಗುವ ಮೂಲಕ ತಮ್ಮ ಅತೃಪ್ತಿ ಹೊರ ಹಾಕಿದ್ದಾರೆ.
ನೆಹರು ಓಲೇಕರ್, ಸುನೀಲ್ ಕುಮಾರ್, ರಾಮಣ್ಣ ಲಮಾಣಿ ಸೇರಿದಂತೆ ಹಲವು ಶಾಸಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಯಡಿಯೂರಪ್ಪ ಆಪ್ತರಾದ ರೇಣುಕಾಚಾರ್ಯ, ಮುರುಗೇಶ್ ನಿರಾಣಿಯಂತಹ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರಿಗೆ ಭಾರೀ ನಿರಾಸೆಯಾಗಿದೆ.
ಬಾಲಚಂದ್ರ ಜಾರಕಿಹೊಳಿಯವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಬಹಳ ನಿರೀಕ್ಷೆಯಿತ್ತು, ಆದರೆ ಅವರಿಗೆ ಸಚಿವ ಸ್ಥಾನ ನೀಡದೆ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ಕೊಟ್ಟ ಹಿನ್ನೆಲೆಯಲ್ಲಿ ನಾಯಕರಲ್ಲಿ ಬೇಸರ ಮೂಡಿಸಿದೆ.
ಹಿರಿತನ, ನಿಷ್ಠಾವಂತರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ತಿಪ್ಪಾರೆಡ್ಡಿ ಗೈರು ಹಾಜರಾಗಿದ್ದಾರೆ. ಬಿಎಸ್ವೈ ಮತ್ತು ಹೈಕಮಾಂಡ್ಗೆ ಇದನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದು ಅವರು ಹೇಳಿದ್ದಾರೆ.
17 ಶಾಸಕರಿಗೆ ಸಚಿವ ಸ್ಥಾನದ ಭಾಗ್ಯ ದೊರೆತಿದ್ದು ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲೂ ನಮಗೆ ಸ್ಥಾನ ಸಿಗುವ ಸಾಧ್ಯತೆ ಇಲ್ಲ ಎಂದು ಹಲವರು ಬಹಿರಂಗವಾಗಿಯೇ ಹೇಳಿದ್ದಾರೆ.
ಸಾಕಷ್ಟು ಹಿರಿಯರಾಗಿದ್ದು, ಐದಾರು ಬಾರಿ ಶಾಸಕರಾಗಿದ್ದರೂ ಸಚಿವ ಸ್ಥಾನ ದೊರೆಯದಿರುವುದಕ್ಕೆ ಹಲವರು ಅತೃಪ್ತಿ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಪ್ರಯತ್ನ ಮಾಡಿದರೂ ನಮಗೆ ಪ್ರತಿಫಲ ದೊರೆತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಹೈಕಮಾಂಡ್ ಜಿಲ್ಲಾವಾರು, ಜಾತಿವಾರು ಅಳೆದು ಸುರಿದು ಪ್ರಾತಿನಿಧ್ಯ ನೀಡಿದೆ. ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕು.