ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಆರೋಗ್ಯಕರ ಮೌಲ್ಯಗಳಿವೆ-ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

 ಬೆಂಗಳೂರು, ಆ.20- ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಆರೋಗ್ಯಕರ ಮೌಲ್ಯಗಳಿದ್ದು, ಅವುಗಳನ್ನು ಆಧುನಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕರೆ ನೀಡಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಸಂಸ್ಕೃತಿ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆಧುನಿಕತೆಯ ಬದುಕಿನಲ್ಲಿ ಅನೇಕ ಅನಪೇಕ್ಷಿತ ಅಂಶಗಳು ನಮ್ಮ ಮೌಲ್ಯಗಳನ್ನು ಕುಸಿಯುವಂತೆ ಮಾಡುತ್ತಿದ್ದು, ಅವುಗಳ ಬಗ್ಗೆ ಆದಷ್ಟೂ ಎಚ್ಚರದಿಂದ ಇರಬೇಕು ಎಂದು ಹೇಳಿದರು.

ಆಧುನಿಕತೆ ಮತ್ತು ಪರಂಪರೆಯು ಒಂದಕ್ಕೊಂದು ಸಮ್ಮಿಲನಗೊಂಡು ಇವತ್ತಿನ ಸಂಕೀರ್ಣ ಬದುಕನ್ನು ರೂಪಿಸಬೇಕಾಗಿದೆ ಎಂದ ಅವರು, ಜಾನಪದ ಮತ್ತು ಶಿಷ್ಟ ಸಂಸ್ಕೃತಿ ಎರಡನ್ನೂ ಪರಿಗಣಿಸಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿರುವ ಪ್ರತಿಷ್ಠಾನವನ್ನು ಅಭಿನಂದಿಸಿದರು.

ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಎಂ.ಎನ್. ವೆಂಕಟಾಚಲಯ್ಯ ಮಾತನಾಡಿ, ಯುವಜನತೆಯಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ಉತ್ತಮ ಮೌಲ್ಯಗಳನ್ನು ಪುನರ್ ಸೃಷ್ಟಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ವೇಮಗಲ್ ಪ್ರತಿಷ್ಠಾನದಂತಹ ಸಾಂಸ್ಕೃತಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಮಾಡುತ್ತಿರುವ ಕೆಲಸ ಅಭಿನಂದನಾರ್ಹ ಎಂದು ಹೇಳಿದರು. ಇಂದಿನ ಡಿಜಿಟಲ್ ಯುಗದಲ್ಲಿ ವಿಜ್ಞಾನವನ್ನು ಸಾಂಸ್ಕೃತಿಕ ಅನುಸಂಧಾನದ ಮೂಲಕ ಮನುಷ್ಯನ ಬದುಕಿನ ಒಳ್ಳೆಯದಕ್ಕಾಗಿ ಉಪಯೋಗಿಸಿಕೊಳ್ಳಬೇಕೆಂದು ಕರೆಕೊಟ್ಟರು.

ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿ ಎಂ.ಚಂದ್ರಶೇಕರ್ ಮಾತನಾಡಿ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವಂತೆ ತಾಳ್ಮೆ ಮತ್ತು ಕಾದುನೋಡುವ ಮೂಲಕ ಪರಿಸ್ಥಿತಿಗಳನ್ನು ನಿಭಾಯಿಸಬೇಕೆಂದರು.

ಕವಿ .ಹೆಚ್.ಎಸ್.ವೆಂಕಟೇಶಮೂರ್ತಿ, ಶ್ರೀ ಕೃಷ್ಣ ಪಾರಿಜಾತ ಜನಪದ ಕಲಾವಿದೆ ಮಲ್ಲವ್ವ ಮ್ಯಾಗೇರಿ, ಸುಗಮ ಸಂಗೀತ ನಿರ್ದೇಶಕ ಬಿ.ವಿ.ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ