ಚಂದಿರನ ಕಕ್ಷೆಗೆ ಚಂದ್ರಯಾನ-2 ಗಗನನೌಕೆ ಯಶಸ್ವಿ ಸೇರ್ಪಡೆ

ಬೆಂಗಳೂರು, ಆ.20-ಚಂದ್ರಯಾನ-2 ಅಭಿಯಾನದ ಮೂಲಕ ವಿಶ್ವದ ಗಮನ ಸೆಳೆದಿರುವ ಭಾರತ ಇಂದು ಶಶಾಂಕನ ಮೇಲೆ ಕಠಿಣ ಸವಾಲಿನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ.

ಚಂದಿರನ ಕಕ್ಷೆಗೆ ಚಂದ್ರಯಾನ-2 ಗಗನನೌಕೆ ಯಶಸ್ವಿಯಾಗಿ ಸೇರ್ಪಡೆಯಾಗಿದೆ. ಈ ಮಹತ್ವದ ಕಾರ್ಯಾಚರಣೆಯೊಂದಿಗೆ ನೌಕೆಯು ಚಂದ್ರನ ಸನಿಹಕ್ಕೆ ಮತ್ತಷ್ಟು ಸರಿದಿದೆ. ಇಂದಿನಿಂದ ಈ ನೌಕೆಯು ಚಂದ್ರನ ಕಕ್ಷೆಯನ್ನು ಪ್ರದಕ್ಷಿಣೆ ಹಾಕಲಿದೆ.

ಚಂದ್ರಯಾನ-2 ನೌಕೆಯನ್ನು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಏರಿಸುವ ಬೆಳಗ್ಗೆ 9 ಗಂಟೆ 2 ನಿಮಿಷಕ್ಕೆ ಸರಿಯಾಗಿ ನೆರವೇರಿದೆ ಎಂದು ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ತಿಳಿಸಿದ್ದಾರೆ.

ಇಸ್ರೋ ನೇತೃತ್ವದ ಚಂದ್ರಯಾನ ಅಭಿಯಾನದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಹಿರಿಯ ಖಗೋಳಶಾಸ್ತ್ರಜ್ಞರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಕ್ಷೆ ಬದಲಾವಣೆಯ ಆರಂಭಿಕ ಹಂತ ಅತ್ಯಂತ ಫಲಪ್ರದವಾಗಿದೆ. ಶಶಾಂಕನ ನಿಗದಿತ ಕಕ್ಷೆಗೆ ನಿಖರವಾಗಿ ಸೇರ್ಪಡೆ ಮಾಡಲು ಇನ್ನೂ ನಾಲ್ಕು ಮಹತ್ವದ ಕಾರ್ಯಾಚರಣೆಗಳನ್ನು ನಡೆಸಬೇಕಿದೆ.

ಅಂತಿಮ ಕಾರ್ಯಾಚರಣೆಯಲ್ಲಿ, ಚಂದ್ರನ ಧ್ರುವ ಪ್ರದೇಶದಲ್ಲಿ ಸುಮಾರು 100 ಕಿ.ಮೀ. ಹತ್ತಿರದ ಕಕ್ಷೆಗೆ ನೌಕೆಯು ಸರಿಯಲಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿರುವ ಮಿಷನ್ ಆಪರೇಷನ್ ಕಾಂಪ್ಲೆಕ್ಸ್ ನೌಕೆಯ ಮೇಲೆ ನಿರಂತರ ನಿಗಾ ವಹಿಸಿದೆ.

ಚಂದ್ರಯಾನ-2 ನೌಕೆಯನ್ನು ಬಾಹುಬಲಿ ಹೆಸರಿನ ಬೃಹತ್ ರಾಕೆಟ್ ಮೂಲಕ ಜುಲೈ 22ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ನೌಕೆಯು ಚಂದ್ರದ ಕಕ್ಷೆಗೆ ಸ್ಥಳಾಂತರಗೊಳ್ಳುವ ನಿಗದಿತ ಪಥದಲ್ಲಿ ಸರಿಯಾಗಿ ಚಂಚರಿಸುತ್ತಿದೆ ಎಂದು ಇಸ್ರೋ ಆಗಸ್ಟ್ 14ರಂದು ಅಧಿಕೃತ ಹೇಳಿಕೆ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ