ಕೊನೆಕ್ಷಣದಲ್ಲಿ ಇಬ್ಬರ ಹೆಸರು ಸೇರ್ಪಡೆ-ಸ್ವತಃ ಬಿಜೆಪಿಯಲ್ಲಿ ಮೂಡಿಸಿದ ಕುತೂಹಲ

ಬೆಂಗಳೂರು, ಆ.20- ಕೇಂದ್ರ ವರಿಷ್ಠರು ಸಿದ್ದಪಡಿಸಿದ ಸಚಿವ ಪಟ್ಟಿಯಲ್ಲಿ ಅಚ್ಚರಿ ಎಂಬಂತೆ ಕೊನೆಕ್ಷಣದಲ್ಲಿ ಇಬ್ಬರ ಹೆಸರು ಸೇರ್ಪಡೆಯಾಗಿರುವುದು ಸ್ವತಃ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದೆ.

ಕಳೆದ ತಡರಾತ್ರಿ ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕಳುಹಿಸಿದ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಮತ್ತು ಸಿ.ಸಿ.ಪಾಟೀಲ್ ಹೆಸರು ಸೇರ್ಪಡೆಯಾಗಿರಲಿಲ್ಲ.

ಮೈಸೂರು ಜಿಲ್ಲೆಯಿಂದ ಎಸ್.ಎ.ರಾಮದಾಸ್ ಹಾಗೂ ಬೆಳಗಾವಿ ಜಿಲ್ಲೆಯಿಂದ ಬಾಲಚಂದ್ರ ಜಾರಕಿಹೊಳಿಯನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ವರಿಷ್ಠರು ಪಟ್ಟಿಯಲ್ಲಿ ಸೂಚಿಸಿದ್ದರು.

ಆದರೆ, ಯಡಿಯೂರಪ್ಪ ಕೊನೆ ಕ್ಷಣದಲ್ಲಿ ಈ ಎರಡು ಹೆಸರುಗಳನ್ನು ಬದಲಾಯಿಸಿ ಬ್ರಾಹ್ಮಣ ಕೋಟಾದಿಂದ ರಾಜಾಜಿನಗರ ಶಾಸಕ ಸುರೇಶ್‍ಕುಮಾರ್ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಪರಾಭವಗೊಂಡಿದ್ದ ಲಕ್ಷ್ಮಣಸವದಿ, ನರಗುಂದ ಶಾಸಕ ಸಿ.ಸಿ.ಪಾಟೀಲ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಪಟ್ಟಿಯನ್ನು ಕೊಂಚ ತಿದ್ದುಪಡಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿದರೆ 8 ಬಾರಿ ಗೆದ್ದಿರುವ ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಮುನಿಸಿಕೊಳ್ಳಲಿದ್ದಾರೆ. ಇದರಿಂದ ಪಕ್ಷದಲ್ಲಿ ಭಿನ್ನಮತ ಉಂಟಾಗಲಿದೆ ಎಂಬುದನ್ನು ವರಿಷ್ಠರಿಗೆ ಯಡಿಯೂರಪ್ಪ ಮನವರಿಕೆ ಮಾಡಿಕೊಟ್ಟಿದ್ದಾರೆ.

ಮೈಸೂರಿನಿಂದ ಎಸ್.ಎ.ರಾಮದಾಸ್ ಅವರನ್ನು ತೆಗೆದುಕೊಳ್ಳಬೇಕಾಗಿತ್ತಾದರೂ ಹಿರಿಯತನದಲ್ಲಿ ಸುರೇಶ್‍ಕುಮಾರ್‍ಗೆ ಮಣೆ ಹಾಕಲಾಗಿದೆ. ರಾಮದಾಸ್, ಸುರೇಶ್‍ಕುಮಾರ್ ಬದಲು ಬಸವನಗುಡಿಯ ರವಿಸುಬ್ರಹ್ಮಣ್ಯ ಅವರಿಗೆ ಸಚಿವ ಸ್ಥಾನ ಸಿಗಬೇಕಾಗಿತ್ತಾದರೂ ಅದೂ ಕೂಡ ಕೊನೆ ಕ್ಷಣದಲ್ಲಿ ಬದಲಾಗಿದೆ.

ಲಕ್ಷ್ಮಣ ಸವದಿ ಹಾಗೂ ಸಿ.ಸಿ.ಪಾಟೀಲ್ ಸಂಪುಟಕ್ಕೆ ಸೇರ್ಪಡೆಯಾಗಿರುವುದು ಬಿಜೆಪಿಯಲ್ಲಿ ಅಚ್ಚರಿ ಮೂಡಿಸಿದೆ. ಈ ಮೊದಲು ಬೆಳಗಾವಿಯಿಂದ ಉಮೇಶ್‍ಕತ್ತಿ ಮತ್ತು ಮಹಿಳಾ ಕೋಟಾದಲ್ಲಿ ಶಶಿಕಲಾ ಜೊಲ್ಲೆಗೆ ಮಂತ್ರಿ ಸ್ಥಾನ ನೀಡಬೇಕೆಂದು ತೀರ್ಮಾನವಾಗಿತ್ತು.

ಕೊನೆ ಕ್ಷಣದಲ್ಲಿ ಲಕ್ಷ್ಮಣಸವದಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಎಲ್ಲಾ ಲೆಕ್ಕಾಚಾರಗಳು ಉಲ್ಟಾಟ ಹೊಡೆದಿವೆ. ಈ ದಿಢೀರ್ ಬೆಳವಣಿಗೆ ಬಿಜೆಪಿಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಆದರೂ ಯಾರೊಬ್ಬರೂ ಪಕ್ಷದ ತೀರ್ಮಾನವನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಮುಂದಿನ ಬೆಳವಣಿಗೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ