ನಾಳೆ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ

ಬೆಂಗಳೂರು, ಆ.19-ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಮೊದಲ ಹಂತದಲ್ಲಿ 14 ಸಚಿವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

ಒಂದು ವೇಳೆ ಕೇಂದ್ರದ ಮಾಜಿ ಸಚಿವ ಅರುಣ್‍ಜೇಟ್ಲಿ ಆರೋಗ್ಯ ಸ್ಥಿತಿ ಏರುಪೇರಾದರೆ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ನಾಳೆ ಬೆಳಗ್ಗೆ 10.30 ರಿಂದ 11.30ರೊಳಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.

ವಿಶೇಷವೆಂದರೆ ಸಂಪುಟ ವಿಸ್ತರಣೆ ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದರೂ ಈ ಕ್ಷಣದವರೆಗೂ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಅಂತಿಮಗೊಂಡಿಲ್ಲ. ಎಲ್ಲವೂ ಊಹಾಪೋಹಗಳ ಮೇಲೆನಡೆಯುತ್ತಿದ್ದು, ಪ್ರತಿಯೊಂದಕ್ಕೂ ದೆಹಲಿ ನಾಯಕರತ್ತ ಕೈ ತೋರಿಸುವಂತಾಗಿದೆ.

ಸಂಜೆಯೊಳಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯನ್ನು ಫ್ಯಾಕ್ಸ್ ಮೂಲಕ ಕಳುಹಿಸಿಕೊಡಲಿದ್ದಾರೆ.ನಂತರವೇ ಯಾರ್ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬುದು ಬಹಿರಂಗಗೊಳ್ಳಲಿದೆ.

ಈ ಕ್ಷಣದವರೆಗೂ ಇರುವ 105 ಶಾಸಕರಲ್ಲಿ ಮಂತ್ರಿ ಭಾಗ್ಯ ಯಾರಿಗೆ ಒಲಿಯಲಿದೆ ಎಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿದೆ.ದೆಹಲಿಯಲ್ಲೇ ವರಿಷ್ಠರು ಪಟ್ಟಿಯನ್ನು ಅಂತಿಮಗೊಳಿಸುತ್ತಿರುವುದರಿಂದ ಎಲ್ಲರೂ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಲಾಬಿ ನಡೆಸಿದರೆ ಸಿಗುವ ಗೂಟಾದ ಕಾರು ಕೈ ತಪ್ಪಿ ಹೋಗಬಹುದೆಂಬ ಭೀತಿಯಿಂದಾಗಿ ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ.

ಈ ಮೊದಲು ಸಂಪುಟಕ್ಕೆ ತೆಗೆದುಕೊಳ್ಳುವವರ ಹೆಸರುಗಳನ್ನು ಬೆಂಗಳೂರಿನಲ್ಲೇ ಅಂತಿಮಗೊಳುತ್ತಿದ್ದವು. ಇದೇ ಮೊದಲ ಬಾರಿಗೆ ದೆಹಲಿ ನಾಯಕರೇ ನಾವೇ ಸಿದ್ಧಪಡಿಸುತ್ತೇವೆ ಎಂದು ಹೇಳಿರುವ ಕಾರಣ 100ಕ್ಕೆ ನೂರರಷ್ಟು ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಭರವಸೆ ಯಾರಲ್ಲೂ ಉಳಿದಿಲ್ಲ.

ಯಾರ್ಯಾರಿಗೆ ಸ್ಥಾನ?
ಮೂಲಗಳ ಪ್ರಕಾರ ನಾಳೆ ವಿಸ್ತರಣೆಯಾಗಲಿರುವ ಸಚಿವ ಸಂಪುಟದಲ್ಲಿ ಯಡಿಯೂರಪ್ಪ 14 ಜನರನ್ನು ಮೊದಲ ಹಂತದಲ್ಲಿ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಗನುಗುಣವಾಗಿ ಹಾಗೂ ಅನರ್ಹಗೊಂಡಿರುವ ಶಾಸಕರ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿ ಅಂತಿಮಗೊಳ್ಳುವವರೆಗೂ ಕನಿಷ್ಠ 10 ಸ್ಥಾನ ಸಂಪುಟದಲ್ಲಿ ಖಾಲಿ ಉಳಿಯಲಿವೆ.

ಈವರೆಗೂ ಬೆಂಗಳೂರಿನಿಂದ ಆರ್.ಅಶೋಕ್, ತುಮಕೂರಿನಿಂದ ಜೆ.ಸಿ.ಮಾಧುಸ್ವಾಮಿ, ಚಿತ್ರದುರ್ಗದಿಂದ ಶ್ರೀರಾಮುಲು, ಶಿವಮೊಗ್ಗದಿಂದ ಕೆ.ಎಸ್.ಈಶ್ವರಪ್ಪ, ಉಡುಪಿಯಿಂದ ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸಪೂಜಾರಿ, ದಕ್ಷಿಣ ಕನ್ನಡದಿಂದ ಎಸ್.ಅಂಗಾರ, ಮಡಿಕೇರಿಯಿಂದ ಕೆ.ಜಿ.ಬೋಪಯ್ಯ, ಬೆಳಗಾವಿಯಿಂದ ಉಮೇಶ್‍ಕತ್ತಿ, ಶಶಿಕಲಾ ಜೊಲ್ಲೆ, ಧಾರವಾಡದಿಂದ ಜಗದೀಶ್ ಶೆಟ್ಟರ್, ಹಾವೇರಿಯಿಂದ ಬಸವರಾಜ ಬೊಮ್ಮಾಯಿ, ಬಾಗಲಕೋಟೆಯಿಂದ ಗೋವಿಂದ ಕಾರಜೋಳ, ಚಿಕ್ಕಮಗಳೂರಿನಿಂದ ಸಿ.ಟಿ.ರವಿ ಹಾಗೂ ಎಂ.ಪಿ.ಕುಮಾರಸ್ವಾಮಿ, ರಾಯಚೂರಿನಿಂದ ಶಿವನಗೌಡ ನಾಯಕ್ ಹೆಸರುಗಳು ಮಂತ್ರಿ ಸ್ಥಾನದ ರೇಸ್‍ನಲ್ಲಿವೆ.

ಈ ಬಾರಿ ಜಾತಿ, ಪ್ರದೇಶವಾರು, ಸಾಮಥ್ರ್ಯ ಇವೆಲ್ಲವಕ್ಕೂ ಹೈಕಮಾಂಡ್ ತಿಲಾಂಜಲಿ ಹಾಡಿದ್ದು, ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗುವವರಿಗೆ ಹೊಸ ತಂತ್ರ ರೂಪಿಸಿದ್ದಾರೆ.

ಪಕ್ಷ ಸಂಘಟನೆ, ಕ್ಷೇತ್ರದಲ್ಲಿ ಮತದಾರರಜೊತೆ ಹೊಂದಿರುವ ಸಂಪರ್ಕ, ವೈಯಕ್ತಿಕ ವರ್ಚಸ್ಸು, ಕಳಂಕರಹಿತರು, ಭ್ರಷ್ಟಾಚಾರ ರಹಿತರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಸಂಪುಟ ವಿಸ್ತರಣೆ ಎಂಬುದು ಗಜ ಪ್ರಸವನ ದಂತಾಗಿದ್ದು, ಯಾರಿಗೆ ಮಂತ್ರಿ ಸ್ಥಾನ ಒಲಿಯಲಿದೆ ಎಂಬ ಗುಟ್ಟು ಕೊನೆ ಕ್ಷಣದಲ್ಲಿ ರಟ್ಟಾಗಲಿದೆ.

ಭರ್ಜರಿ ಲಾಬಿ:
ನಾಳೆ ಸಂಪುಟ ವಿಸ್ತರಣೆಯಾಗುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪನವರ ನಿವಾಸ ಡಾಲರ್ಸ್ ಕಾಲೋನಿಯಲ್ಲಿ ಸಚಿವಾಕಾಂಕ್ಷಿಗಳ ದಂಡೇ ಆಗಮಿಸಿತ್ತು.

ಬೆಳಗ್ಗೆಯಿಂದ ದವಳಗಿರಿಯ ನಿವಾಸಕ್ಕೆ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಪ್ರಭು ಚೌಹಾಣ್ ಸೇರಿದಂತೆ ಮತ್ತಿತರರು ಆಗಮಿಸಿದ್ದರು.

ಸಂಪುಟಕ್ಕೆ ತಮ್ಮನ್ನು ಪರಿಗಣಿಸುವಂತೆ ಕೊನೆ ಕ್ಷಣದವರೆಗೂ ಆಕಾಂಕ್ಷಿಗಳು ಸಿಎಂ ಬಿಎಸ್‍ವೈ ಮೇಲೆ ಒತ್ತಡ ಹಾಕುತ್ತಿದ್ದಾರೆ.ಈ ಬಾರಿ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕೆಂಬುದನ್ನು ವರಿಷ್ಠರೇ ತೀರ್ಮಾನಿಸಿರುವುದರಿಂದ ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಯಡಿಯೂರಪ್ಪ ಕೈ ಚೆಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ