ಬೆಂಗಳೂರು, ಮಾ.31- ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರ ಹತ್ಯೆ ಪ್ರಕರಣದಲ್ಲಿ ನಮ್ಮ ಸರ್ಕಾರ ಆರೋಪಿಗಳನ್ನು ಹಿಡಿದು ಜೈಲಿಗೆ ಹಾಕಿದೆ. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಕೂಡ ಸಲ್ಲಿಸಿದೆ. ಹೀಗಿರುವಾಗ ಅಮಿತ್ ಶಾ ಈ ವಿಷಯದಲ್ಲಿ ಕಡಿದು ಕಟ್ಟೆ ಹಾಕುವುದು ಏನು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದು ಕಾರ್ಯಕರ್ತರ ಹತ್ಯೆ ಮಾಡಿದವರಿಗೆ ತಕ್ಕ ಶಿಕ್ಷೆ ಕೊಡಿಸುವುದಾಗಿ ಅಮಿತ್ಶಾ ಹೇಳಿದ್ದಾರೆ. ನಾನು ಹಿಂದು ಕಾರ್ಯಕರ್ತರ ಹತ್ಯೆ ಎಂದು ಹೇಳಲು ಹೋಗುವುದಿಲ್ಲ. ಏಕೆಂದರೆ ನಾವೂ ಕೂಡ ಹಿಂದುಗಳೇ. ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಿಷ್ಪಕ್ಷಪಾತವಾಗಿ ನಡೆದುಕೊಂಡಿದೆ. ತಪ್ಪಿತಸ್ಥರನ್ನು ಈಗಾಗಲೇ ಬಂಧಿಸಲಾಗಿದೆ. ಅಮಿತ್ ಶಾ ಅವರು ಬಂದು ಮಾಡುವ ಕೆಲಸ ಏನೂ ಇಲ್ಲ. ಅವರ ಪ್ರಕಾರ ರಾಜ್ಯದಲ್ಲಿ 23 ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯಾಗಿದೆ. ಅದರಲ್ಲಿ 13 ಮಂದಿ ಹಿಂದು ಮುಖಂಡರಿಂದಲೇ ಹತ್ಯೆಯಾಗಿದ್ದಾರೆ. 10 ಮಂದಿ ಮುಸ್ಲಿಂರಿಂದ ಹತ್ಯೆಯಾಗಿದ್ದರೆ, ರಾಜಕೀಯ ಕಾರಣಕ್ಕೆ ಎರಡು ಕೊಲೆಗಳಾಗಿವೆ. ವೈಯಕ್ತಿಕ ಕಾರಣಕ್ಕೆ ನಾಲ್ಕು, ಎರಡು ಆತ್ಮಹತ್ಯೆಗಳಾಗಿವೆ, ಭೂ ವಿವಾದ, ಅಕ್ರಮ ಸಂಬಂಧ, ಕೌಟುಂಬಿಕ ವಿವಾದ, ಮೀನುಗಾರಿಕೆಯ ತಕರಾರು ಹಾಗೂ ಅಪಘಾತದಿಂದ ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಇದರ ಹೊರತಾಗಿ ಸಂಘ ಪರಿವಾರದ ನಾಯಕರು 12 ಮಂದಿ ಎಸ್ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರನ್ನು 10 ಜನ ಹಿಂದು ಅಮಾಯಕರನ್ನು ಕೊಂದಿದ್ದಾರೆ. ಇದರ ಬಗ್ಗೆ ಅಮಿತ್ ಶಾ ಅಥವಾ ಮೋದಿಯಾಗಲಿ ಏಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.
ಜರ್ನಾಧನರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. ಆದರೆ, ಜರ್ನಾಧನರೆಡ್ಡಿ ಎಲ್ಲಾ ಕಡೆ ಪ್ರವಾಸ ಮಾಡುತ್ತಿದ್ದಾರೆ. ನನ್ನ ಕ್ಷೇತ್ರಕ್ಕೂ ಆಗಮಿಸಿದ್ದರು. ಆನೇಕಲ್ಗೂ ಹೋಗಿದ್ದಾರೆ. ಒಂದೆಡೆ ಶಾ, ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ. ಇನ್ನೊಂದೆಡೆ ಜರ್ನಾಧನರೆಡ್ಡಿ ಎಲ್ಲಾ ಕಡೆ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಒಳ ಒಪ್ಪಂದದಿಂದ ನಿರಂತರವಾಗಿ ರಾಜಕಾರಣ ನಡೆಯುತ್ತಿದೆ ಎಂದು ರೆಡ್ಡಿ ಆರೋಪಿಸಿದರು.