ಬೆಂಗಳೂರಿನಲ್ಲಿ ಬಯಲಿಗೆ ಬಂತು ಮತ್ತೊಂದು ಹಗರಣ; ಕಾಂಗ್ರೆಸ್ ನಾಯಕರು ಶಾಮೀಲು?

ಬೆಂಗಳೂರು: ನಗರದಲ್ಲಿ ಮತ್ತೊಂದು ಬೃಹತ್ ಹಗರಣ ಬಯಲಿಗೆ ಬಂದಿದೆ. ವೈಟ್ ಟ್ಯಾಪಿಂಗ್  ಕಾಮಗಾರಿಯಲ್ಲಿ ಭಾರೀ ಗೋಲ್ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಪ್ರಕರಣದಲ್ಲಿ ಪ್ರಮುಖ ಕಾಂಗ್ರೆಸ್​ ನಾಯಕರ ಹೆಸರುಗಳು ಕೇಳಿ ಬಂದಿವೆ.

ವೈಟ್​ ಟ್ಯಾಪಿಂಗ್​ನಲ್ಲಿ ಅಕ್ರಮ​ ನಡೆದಿರುವ ಬಗ್ಗೆ 2017ರಲ್ಲಿ ಬಿಜೆಪಿ ಮುಖಂಡ ಎನ್ಆರ್ ರಮೇಶ್ ತನಿಖಾ ಸಂಸ್ಥೆಗೆ ದೂರು ನೀಡಿದ್ದರು. ಎಸಿಬಿ, ಬಿಎಂಟಿಎಫ್, ಲೋಕಾಯುಕ್ತ ಹಾಗೂ ಎಸಿಎಂಎಂ ಕೋರ್ಟ್​​ನಲ್ಲಿ ಅವರು ಖಾಸಗಿ ದೂರು ದಾಖಲಿಸಿದ್ದರು.

ವೈಟ್​ ಟ್ಯಾಪಿಂಗ್​ ಮಾಡಲು ಪ್ರತಿ ಕಿಲೋ ಮೀಟರ್​ಗೆ ತಗಲುವ ವೆಚ್ಚ 3 ಕೋಟಿ ರೂಪಾಯಿ. ಆದರೆ, ಪ್ರತಿ ಕಿ.ಮೀಗೆ 11 ಕೋಟಿ ಬಿಲ್ ಮಾಡಲಾಗಿದೆ ಎಂಬುದು ರಮೇಶ್​ ಆರೋಪ. ಅಲ್ಲದೆ ಈ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕರಾದ ಜಿ ಪರಮೇಶ್ವರ್​ ಹಾಗೂ ಕೆ.ಜೆ.ಜಾರ್ಜ್ ದೊಡ್ಡ ಮೊತ್ತದಲ್ಲಿ ಕಿಕ್​ ಬ್ಯಾಕ್​ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಸಂಬಂಧ ಗುರುವಾರ ಮಹತ್ವದ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈಗಾಗಲೇ ಎರಡು ಹಂತದ ವೈಟ್​ ಟ್ಯಾಪಿಂಗ್​ ಕಾರ್ಯ ಪೂರ್ಣಗೊಂಡಿದೆ. ಹಾಗಾಗಿ 1,490 ಕೋಟಿ ರೂ. ವೆಚ್ಚದಲ್ಲಿ ನಡೆಯಬೇಕಿದ್ದ ಮೂರನೇ ಹಂತದ ವೈಟ್ ಟ್ಯಾಪಿಂಗ್ ಕಾಮಗಾರಿ ಸ್ಥಗಿತಕ್ಕೆ ಸಿಎಂ ಸೂಚನೆ ನೀಡಿದ್ದಾರೆ.

ಅಲ್ಲದೆ, ಒಂದು ಹಾಗೂ ಎರಡನೇ ಹಂತದ ಕಾಮಗಾರಿ ತನಿಖೆಗೆ ಆದೇಶಿಸಿರುವ ಬಿಎಸ್​ವೈ ಆದೇಶಿಸಿದ್ದಾರೆ. ಇದರಿಂದ ಪರಮೇಶ್ವರ್​ ಹಾಗೂ ಜಾರ್ಜ್​ಗೆ ಹೊಸ ಸಂಕಷ್ಟ ಎದುರಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ