ಬೆಂಗಳೂರು,ಆ.17- ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾಗೂ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರದಿಂದ ನೆರವು ಪಡೆಯಲು ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯಬೇಕು. ನೆರೆ ಮತ್ತು ಬರ ವಿಚಾರದಲ್ಲಿ ಚರ್ಚೆಯಾಗಲು ರಾಜ್ಯದಲ್ಲಿ ಅಧಿವೇಶನ ಕರೆಯಬೇಕೆಂದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೆಂದೂ ಆಗದಂತಹ ಅನಾಹುತ ರಾಜ್ಯದಲ್ಲಾಗಿದೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಧಾನಿಯವರನ್ನು ಭೇಟಿ ಮಾಡಿದಾಗ ಒಂದೇ ಒಂದು ಶಬ್ಧ ಮಾತನಾಡಿಲ್ಲ, ನೆರೆ ಮತ್ತು ಪ್ರವಾಹದ ಬಗ್ಗೆ ಏನು ಮಾತನಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಸರ್ಕಾರವಿದ್ದಾಗ ಮಹದಾಯಿ ಮತ್ತು ಬರದ ವಿಚಾರವಾಗಿ ಪ್ರಧಾನಿಯವರನ್ನು ಭೇಟಿ ಮಾಡಿದಾಗಲೂ ಬಿಜೆಪಿಯವರು ಮಾತನಾಡುತ್ತಿರಲಿಲ್ಲ. ಈಗ ನಾವೇ ಮಾತನಾಡುತ್ತೇವೆ. ಸರ್ವಪಕ್ಷದ ನಿಯೋಗ ಕರೆದೊಯ್ಯಲಿ ಎಂದು ಹೇಳಿದರು.
ರಾಜ್ಯದಲ್ಲಿ ಆರು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದೆ. 1ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ.ಕೇಂದ್ರ ಸರ್ಕಾರ 5ಸಾವಿರ ಕೋಟಿ ಬಿಡುಗಡೆ ಮಾಡಬೇಕು.ಆದರೆ ರಾಜ್ಯ ಸರ್ಕಾರ ಕಣ್ಣು-ಕಿವಿ ಕಳೆದುಕೊಂಡಿದೆ. ಸರ್ಕಾರ ಜೀವಂತವಿದ್ದರೆ ಮೊದಲು ಈ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯಲಿ ಎಂದು ಒತ್ತಾಯಿಸಿದರು.
ಇದೊಂದು ಅಕ್ರಮ ಸರ್ಕಾರ ಎಂದು ಟೀಕಿಸಿದ ಅವರು, ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರದಿಂದ 1600ಕೋಟಿ ಬಿಡುಗಡೆ ಮಾಡಿದ್ದರು.ಈಗ ಮೋದಿ ಅವರಿಗೆ ಏನು ತೊಂದರೆ.ನೆರೆ ಹಾವಳಿ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದರು.
ಇನ್ನು ನಮ್ಮ ರಾಜ್ಯ ಸರ್ಕಾರ ನೆರೆ ಹಾವಳಿ ಅಂದಾಜನ್ನೇ ಸಿದ್ಧಪಡಿಸಿಲ್ಲ 15ದಿನ ಕಳೆದರೂ ಇನ್ನು ವರದಿ ಸಿದ್ಧವಾಗಿಲ್ಲ, ಯಾವಾಗ ಕೇಂದ್ರಕ್ಕೆ ವರದಿ ಸಲ್ಲಿಸುವುದು ಎಂದು ಪ್ರಶ್ನಿಸಿದರು, ಆ ನಂತರವಷ್ಟೆ ಅಧ್ಯಯನ ತಂಡ ಬಂದು ಪರಿಶೀಲನೆ ನಡೆಸಿ ವರದಿ ನೀಡಲಿದೆ. ಬಳಿಕ ಪರಿಹಾರ ಬಿಡುಗಡೆ ಮಾಡಲಾಗುತ್ತದೆ.ರಾಜ್ಯ ಇನ್ನು ವರದಿ ಸಿದ್ಧಪಡಿಸದಿದ್ದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1983ರ ನಂತರ ಇಂತಹ ಸರ್ಕಾರವನ್ನು ನೋಡಿಯೇ ಇರಲಿಲ್ಲ. ಮಂತ್ರಿ ಮಂಡಲವೇ ಇಲ್ಲ. ಮೊದಲ ಬಾರಿ ಸ್ವತಂತ್ರ ದಿನಾಚರಣೆ ವೇಳೆ ರಾಜ್ಯದಲ್ಲಿ ಡಿಸಿಗಳೇ ಧ್ವಜಾರೋಹಣ ಮಾಡಿದ್ದಾರೆ.ಇದೊಂದು ನಾಚಿಕೆಗೇಡಿನ ಸಂಗತಿ.
25 ಮಂದಿ ಬಿಜೆಪಿ ಸಂಸದರಿದ್ದರೂ ಕೇಂದ್ರದಿಂದ ಮಲತಾಯಿ ಧೋರಣೆ ಮುಂದುವರೆದಿದೆ.ಒಂದು ರೂ.ಸಹ ಬರಪರಿಹಾರ ನೀಡಿಲ್ಲ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮ್ ಮತ್ತು ಅಮಿತ್ ಶಾ ನೆರೆ ಪ್ರದೇಶಗಳಿಗೆ ಕಾಟಾಚಾರಕ್ಕೆ ಬಂದು ಹೋದರೆ ಎಂದು ಕಿಡಿಕಾರಿದರು.
17 ಜಿಲ್ಲೆಗಳ 102 ತಾಲೂಕುಗಳು ಬರಪೀಡಿತವಾಗಿವೆ. 7 ಜಿಲ್ಲೆಗಳ 42 ತಾಲೂಕುಗಳ 192 ಹೋಬಳಿಗಳಿಗೆ ಕುಡಿಯುವ ನೀರು, ಮೇವು, ಔಷಧಿ ಒದಗಿಸಬೇಕಾಗಿದೆ.ಹಿಂಗಾರು ಹಂಗಾಮಿನ ಬರಪರಿಸ್ಥಿತಿ ಬಗ್ಗೆ ಕಳೆದ ಫೆಬ್ರವರಿಯಲ್ಲೇ ಮನವಿ ಸಲ್ಲಿಸಿದ್ದರೂ ಇದುವರೆಗೂ ರಾಜ್ಯಕ್ಕೆ ಕೇಂದ್ರದಿಂದ ಹಣ ಬಂದಿಲ್ಲ, ಜನರ ನಿಜವಾದ ಸಮಸ್ಯೆ ಮರೆಮಾಚಲು, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಯಾಗಿ 22ದಿನವಾದರೂ ಮಂತ್ರಿಮಂಡಲ ರಚಿಸಿಲ್ಲ, ಜನರು ಸಂಕಷ್ಟದಲ್ಲಿದ್ದರೂ ಸ್ಪಂದಿಸುವ ಸರ್ಕಾರವಿಲ್ಲ,ನೂತನ ಸರ್ಕಾರ ವಿಫಲವಾಗಿದೆ. ತಕ್ಷಣ ಬರಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು.