ನವದೆಹಲಿ,ಆ.17- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿ ಹಿಂಡುವ ಕೆಲಸ ಬಿಟ್ಟು ಸರ್ಕಾರಕ್ಕೆ ಅಗತ್ಯವಿದ್ದರೆ ರಚನಾತ್ಮಕ ಸಲಹೆ ನೀಡಲಿ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ನೆರೆಪೀಡಿತ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂಬ ಟ್ವೀಟ್‍ಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಹುಳಿ ಹಿಂಡುವ ಕೆಲಸ ನಿಲ್ಲಿಸಬೇಕು. ಇಲ್ಲದಿದ್ದರೆ ಅವರಿಗೆ ನಿದ್ದೆರಾಮಯ್ಯ ಬಿರುದು ಸಿಗುತ್ತದೆ ಎಂದು ವ್ಯಂಗ್ಯವಾಡಿದರು.
ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲೂ ಅನ್ಯಾಯ ಮಾಡಿಲ್ಲ. ಎಲ್ಲ ಹಂತದಲ್ಲೂ ನಮಗೆ ಸ್ಪಂದಿಸಿದೆ. ಹಣ ಬಿಡುಗಡೆ ವಿಷಯದಲ್ಲಿ ವಿಳಂಬವಾಗಿರಬಹುದು. ಆದರೆ ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪ ಸರಿಯಲ್ಲ ಎಂದು ಆಕ್ಷೇಪಿಸಿದರು.
ರಾಜ್ಯದಲ್ಲಿ ಪ್ರವಾಹ ಉಂಟಾದ ಕ್ಷಣವೇ ಮುಖ್ಯಮಂತ್ರಿ ಯಡಿಯೂರಪ್ಪನವರು ಕೇಂದ್ರಕ್ಕೆ ಮಾಹಿತಿ ನೀಡಿದ ತಕ್ಷಣ ಎನ್‍ಡಿಆರ್‍ಎಫ್ ತಂಡ, ಭೂ ಸೇನೆ, ನೌಕಾ ಸೇನೆ, ವಾಯುಸೇನೆ, ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‍ಗಳು, ದೋಣಿಗಳು ಸೇರಿದಂತೆ ಎಲ್ಲ ರೀತಿಯ ನೆರವು ನೀಡಿದೆ. ಎಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸಿದ್ದರಾಮಯ್ಯನವರು ಬಹಿರಂಗಪಡಿಸಬೇಕೆಂದು ಸವಾಲು ಹಾಕಿದರು.
ನಿನ್ನೆ ಪ್ರಧಾನಿಯವರನ್ನು ಭೇಟಿಯಾದ ಮೇಲೆ ರಾಜ್ಯದ ಅತಿವೃಷ್ಟಿ ಕುರಿತಂತೆ 45 ನಿಮಿಷ ನಮ್ಮಿಂದ ಮಾಹಿತಿ ಪಡೆದಿದ್ದಾರೆ. ಸಂತ್ರಸ್ತರಿಗೆ ಪರಿಹಾರವನ್ನು ಸಮರ್ಪಕವಾಗಿ ವಿತರಣೆ ಮಾಡಬೇಕೆಂದು ಸೂಚಿಸಿದ್ದಾರೆ. 5 ಲಕ್ಷದಲ್ಲಿ ಮನೆ ನಿರ್ಮಿಸಿ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಕ್ಕೆ ಪ್ರಧಾನಿಗಳೇ ತೃಪ್ತಿ ವ್ಯಕ್ತಪಡಿಸಿದ್ದಾರೆ.ಶೀಘ್ರದಲ್ಲೇ ರಾಜ್ಯಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ ಸಮೀಕ್ಷೆ ನಡೆಸುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ.ವರದಿ ಬಂದ ನಂತರ ರಾಜ್ಯಕ್ಕೆ ಪರಿಹಾರ ನೀಡುವುದಾಗಿ ಭರವಸೆ ಕೊಟ್ಟಿರುವಾಗ ನಿರ್ಲಕ್ಷ್ಯ ಮಾಡಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.
ಹಿಂದೆ ಯಾವುದೇ ಪ್ರಧಾನಿಗಳು ಅತಿವೃಷ್ಟಿ, ಬರಗಾಲ ಸೇರಿದಂತೆ ರಾಜ್ಯದ ವಿಷಯಗಳ ಬಗ್ಗೆ ಚರ್ಚಿಸಲು ಇಷ್ಟು ಸಮಯ ತೆಗೆದುಕೊಂಡಿರಲಿಲ್ಲ. ಪ್ರಧಾನಿಯವರು ಬಹಳ ಸಹನೆಯಿಂದ ರಾಜ್ಯದ ಸಮಸ್ಯೆಯನ್ನು ಆಲಿಸಿದ್ದಾರೆ.ಸಿದ್ದರಾಮಯ್ಯನವರು ನಿದ್ದೆಯಿಂದ ಎದ್ದು ಬಡಬಡಾಯಿಸುವುದನ್ನು ಬಿಡಬೇಕೆಂದು ಕುಹುಕವಾಡಿದರು.