ನವದೆಹಲಿ: ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ನಿನ್ನೆ ಮಧ್ಯರಾತ್ರಿ ಕೇಂದ್ರ ಗೃಹಸಚಿವ ಅಮಿತ್ ಶಾ, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆಯಲ್ಲಿ ಆ. 9ರಂದು ಅರುಣ್ ಜೇಟ್ಲಿ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವಾರದಿಂದ ಏಮ್ಸ್ ಆಸ್ಪತ್ರೆಯ ವೈದ್ಯರು ಅರುಣ್ ಜೇಟ್ಲಿ ಆರೋಗ್ಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದುವರೆಗೂ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಇಲಾಖೆಯ ರಾಜ್ಯ ಸಚಿವೆ ಅಶ್ವಿನಿ ಚೌಬೆ, ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ, ಜೆಡಿಯು ಅಧ್ಯಕ್ಷ ಶರದ್ ಯಾದವ್ ಕಳೆದ ವಾರ ಏಮ್ಸ್ ಆಸ್ಪತ್ರೆಗೆ ತೆರಳಿ ಅರುಣ್ ಜೇಟ್ಲಿ ಅವರ ಆರೋಗ್ಯ ವಿಚಾರಿಸಿದ್ದರು.
ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಈ ಹಿಂದೆಯೂ ಏಮ್ಸ್ನಲ್ಲಿ ಚಿಕಿತ್ಸೆ ಪಡೆದಿದ್ದರು. ಅರುಣ್ ಜೇಟ್ಲಿ ಮೂಲತಃ ವಕೀಲರಾಗಿದ್ದು, ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಪ್ರಭಾವಿ ನಾಯಕರಾಗಿದ್ದವರು. ಜತೆಗೆ ಮೋದಿ ಸರ್ಕಾರದ ಟ್ರಬಲ್ ಶೂಟರ್ ಎಂದೂ ಕರೆಸಿಕೊಂಡವರು. ಈ ಬಾರಿ ಅವರ ಆರೋಗ್ಯ ಹದಗೆಟ್ಟ ಕಾರಣ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
2019ರ ಜನವರಿಯಲ್ಲಿ ಜೇಟ್ಲಿ ಅಮೆರಿಕಾದಲ್ಲಿ ಎಡಗಾಲಿನಲ್ಲಿ ಆಗಿದ್ದ ಸಾಫ್ಟ್ ಟಿಶ್ಯು ಕ್ಯಾನ್ಸರ್ ಆಪರೇಷನ್ಗೆ ಒಳಗಾಗಿದ್ದರು. ಮೋದಿ ಸರ್ಕಾರದ ಆರನೇ ಮತ್ತು ಕೊನೆಯ ಬಜೆಟ್ ಮಂಡನೆ ಮಾಡಲೂ ಸಾಧ್ಯವಾಗದೇ ಪಿಯೂಶ್ ಗೋಯಲ್ ಬಜೆಟ್ ಮಂಡಿಸಿದ್ದರು. ಮೋದಿ ನೇತೃತ್ವದ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಎರಡನೇ ಬಾರಿ ಅಧಿಕಾರಕ್ಕೆ ಬಂದಾಗ ಜೇಟ್ಲಿ ಅವರೇ ಸಚಿವ ಸಂಪುಟದಿಂದ ದೂರ ಉಳಿಯುವ ನಿರ್ಧಾರವನ್ನು ತಿಳಿಸಿದ್ದರು.
ಇದೀಗ ರಾತ್ರೋರಾತ್ರಿ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಡಾ. ಹರ್ಷವರ್ಧನ್ ಏಮ್ಸ್ ಆಸ್ಪತ್ರೆಗೆ ತೆರಳಿರುವುದರಿಂದ ಅರುಣ್ ಜೇಟ್ಲಿ ಅವರ ಆರೋಗ್ಯದ ಬಗ್ಗೆ ಆತಂಕ ಮನೆಮಾಡಿದೆ. ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು, ಈ ಬಗ್ಗೆ ಯಾವ ನಾಯಕರಾಗಲಿ, ಅವರ ಕುಟುಂಬಸ್ಥರಾಗಲಿ, ಆಸ್ಪತ್ರೆಯ ವೈದ್ಯರಾಗಲಿ ನಿಖರವಾದ ಮಾಹಿತಿ ನೀಡಿಲ್ಲ.