ಬೆಂಗಳೂರು,ಆ.16-ಸರ್ಕಾರದ ವರ್ಗಾವಣೆಯನ್ನ ಪ್ರಶ್ನಿಸಿ ಕೇಂದ್ರ ಆಡಳಿತ ನ್ಯಾಯಮಂಡಳಿ ( ಸಿ ಎ ಟಿ ) ಮೆಟ್ಟಿಲೇರಿದ್ದ ಅಲೋಕ್ ಕುಮಾರ್ ಏಕಾಏಕಿ ತಮ್ಮ ಅರ್ಜಿ ಹಿಂಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ರನ್ನು ಬೆಂಗಳೂರು ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ಒಂದೇ ತಿಂಗಳಿನಲಿಬಿಜೆಪಿ ಸರ್ಕಾರ ವರ್ಗಾವಣೆ ಮಾಡಿತ್ತು.ಅವರ ಸ್ಥಾನಕ್ಕೆ ಭಾಸ್ಕರ್ ರಾವ್ ನೇಮಿಸಿ ಆದೇಶ ಹೊರಡಿಸಿತ್ತು.ಇದನ್ನ ಪ್ರಶ್ನಿಸಿದ್ದ ಅಲೋಕ್ ಕುಮಾರ್ ಸಿ ಎ ಟಿ ಮೆಟ್ಟಿಲೇರಿದ್ದರು.ಆದರೆ ಇಂದು ವಿಚಾರಣೆ ಹಂತದಲ್ಲಿರುವ ಅಲೋಕ್ ಕುಮಾರ್ ತಮ್ಮ ಅರ್ಜಿ ವಾಪಸ್ ಪಡೆದಿರುವುದು ನಾನಾ ಸಂಶಯಗಳನ್ನು ಹುಟ್ಟು ಹಾಕಿದೆ.
ಈ ವಿಷಯವನ್ನು ಖಚಿತಪಡಿಸಿದ ಇಂದಿನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಅಲೋಕ್ ಕುಮಾರ್ ಅರ್ಜಿಯನ್ನು ಹಿಂಪಡೆದಿದ್ದಾರೆ.ಈ ಬಗ್ಗೆ ನಾನು ಹೆಚ್ಚು ಏನೂ ಮಾತನಾಡುವುದಿಲ್ಲ ಎಂದಿದ್ದಾರೆ.
ನ್ಯಾಯಾಂಗ ಸದಸ್ಯ ಕೆ ಬಿ ಸುರೇಶ್ ನೇತೃತ್ವದ ನ್ಯಾಯಪೀಠ, ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಡಿಪಿಎಆರ್ ಇಲಾಖೆ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ನಗರ ಪೊಲೀಸ್ ಆಯುಕ್ತರು ಮತ್ತು ಯೂನಿಯನ್ ಆಫ್ ಇಂಡಿಯಾಗೆ ನೊಟೀಸ್ ಜಾರಿಗೊಳಿಸುವಂತೆ ಆದೇಶ ನೀಡಿದೆ.
ತಮ್ಮ ವರ್ಗಾವಣೆ ಅಮಾನ್ಯ, ಅನೂರ್ಜಿತ ಮತ್ತು ನ್ಯಾಯಸಮ್ಮತವಲ್ಲ, ಪೊಲೀಸ್ ಕಾಯ್ದೆ 1963 ಮತ್ತು ಭಾರತೀಯ ಪೊಲೀಸ್ ಸೇವೆ(ಕ್ಯಾಡರ್) ನಿಯಮ 1954ಕ್ಕೆ ವಿರುದ್ಧವಾಗಿ ಒಂದು ಹುದ್ದೆಯಲ್ಲಿ ಒಂದು ವರ್ಷ ಅವಧಿ ಪೂರೈಸುವ ಮುನ್ನವೇ ತಮ್ಮನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಅಲೋಕ್ ಕುಮಾರ್ ಅರ್ಜಿ ಸಲ್ಲಿಸಿದ್ದರು.
ಈ ಮಧ್ಯೆ ನೂತನ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಭಾಸ್ಕರ್ ರಾವ್ ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು.ಇದರ ತನಿಖೆ ಮಾಡಿದ್ದ ಸಿಸಿಬಿ, ಅಲೋಕ್ ಕುಮಾರ್ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭ ಮಾಡಲಾಗಿದ್ದ ಟ್ಯಾಪ್ ಆಡಿಯೋ ಎಂದು ವರದಿ ನೀಡಿತ್ತು.ಅಲ್ಲದೆ ಇದೇ ಸಂದರ್ಭ ಹಲವು ರಾಜಕೀಯ ನಾಯಕರ ಆಡಿಯೋ ಟ್ಯಾಪ್ ಆಗಿರುವ ಮಾಹಿತಿಯನ್ನ ಸಿಸಿಬಿ ಬಹಿರಂಗಪಡಿಸಿತ್ತು.ಈಗ ಇದರ ತನಿಖೆಯನ್ನ ಮಾಡಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ.
ಒಂದು ವೇಳೆ ಸಿಬಿಐ ಅಥವಾ ಸಿ ಐ ಡಿ ಮುಖಾಂತರ ತನಿಖೆ ಮಾಡಿಸಿದ್ರೆ ಅಲೋಕ್ ಕುಮಾರ್ ಗೆ ಕಂಟಕ ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ಏತನ್ಮಧ್ಯೆ, ಅಲೋಕ್ ಕುಮಾರ್ ಅವರು ತಮ್ಮ ಅಧಿಕಾರ ಬಳಿಸಿಕೊಂಡು ಕೆಲವು ಐಪಿಎಸ್ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಮಾಡಿಸಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.ಇದೀಗ ಅವರು ತಮ್ಮ ಅರ್ಜಿಯನ್ನು ಹಿಂಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.