ಅಧಿಕಾರವೂ ಹೋಯ್ತು, ಅದೃಷ್ಟದ ರೂಮೂ ಹೋಯ್ತು; ತಾಜ್​ ವೆಸ್ಟೆಂಡ್​ನಿಂದ ಜೆಪಿ ನಗರದ ನಿವಾಸಕ್ಕೆ ಹೆಚ್​ಡಿಕೆ ಶಿಫ್ಟ್​

ಬೆಂಗಳೂರು: ತಾಜ್ ವೆಸ್ಟೆಂಡ್ಹೋಟೆಲ್ ರೂಂ ತಮಗೆ ಅದೃಷ್ಟ ತಂದುಕೊಟ್ಟಿದೆ. ಹೀಗಾಗಿ, ಅದನ್ನು ಖಾಲಿ ಮಾಡುವುದಿಲ್ಲ ಎಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಕೊನೆಗೂ ತಮ್ಮ ರೂಮನ್ನು ಖಾಲಿ ಮಾಡಿದ್ದಾರೆ. ವಿಪಕ್ಷಗಳು ಎಷ್ಟೇ ಟೀಕೆ ಮಾಡಿದ್ದರೂ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೂಮನ್ನು ಖಾಲಿ ಮಾಡಿರಲಿಲ್ಲ. ಆದರೆ, ಇದೀಗ ರೂಮನ್ನು ಖಾಲಿ ಮಾಡಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ  ತಾಜ್​ ವೆಸ್ಟೆಂಡ್​ ಹೋಟೆಲ್ ರೂಮನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದರು. ಸರ್ಕಾರಿ ಬಂಗಲೆಯನ್ನು ತಿರಸ್ಕರಿಸಿ ಐಷಾರಾಮಿ ಹೋಟೆಲ್​ ರೂಂನಲ್ಲಿ ತಂಗಿರುವುದಕ್ಕೆ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರನ್ನು ಟೀಕಿಸಿದ್ದರು. ಆ ರೂಂ ತಮ್ಮ ಅದೃಷ್ಟದ ರೂಂ ಎಂದು ಹೇಳಿಕೊಂಡಿದ್ದ ಹೆಚ್​.ಡಿ. ಕುಮಾರಸ್ವಾಮಿ ತಮ್ಮ ಆಪ್ತರ ಜೊತೆ ಚರ್ಚೆ ನಡೆಸಲು, ಮಹತ್ವದ ಮೀಟಿಂಗ್ ನಡೆಸಲು ಇದೇ ರೂಂ ಬಳಸುತ್ತಿದ್ದರು. ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ತಾಜ್​ ವೆಸ್ಟೆಂಡ್ ರೂಂನಲ್ಲಿ ವಾಸವಾಗಿದ್ದರು.

ಈ ಹಿಂದೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಹೆಚ್​.ಡಿ. ಕುಮಾರಸ್ವಾಮಿ, ‘ನಾನು 2018ರ ವಿಧಾಸಭಾ ಚುನಾವಣೆಯ ಫಲಿತಾಂಶವನ್ನು ತಾಜ್ ವೆಸ್ಟೆಂಡ್​ ಹೋಟೆಲಿನ ರೂಂನಲ್ಲಿ ಕುಳಿತು ಟಿವಿಯಲ್ಲಿ ವೀಕ್ಷಿಸುತ್ತಿದ್ದೆ. ಅದೇ ಸಮಯದಲ್ಲಿ ಗುಲಾಂ ನಬಿ ಅಜಾದ್ ಕರೆ ಮಾಡಿ ನಾನೇ ಸಿಎಂ ಆಗಬೇಕೆಂದು ಮನವಿ ಮಾಡಿದರು. ಬಳಿಕ ಕಾಂಗ್ರೆಸ್​ ನಾಯಕರೊಂದಿಗೆ ಮಾತುಕತೆ ನಡೆಸಿ ಸಮ್ಮಿಶ್ರ ಸರ್ಕಾರ ರಚಿಸಲಾಯಿತು. ಹೀಗಾಗಿ, ಈ ರೂಂ ನನಗೆ ಅದೃಷ್ಟ ತಂದುಕೊಟ್ಟ ರೂಂ. ಆದ್ದರಿಂದ ನಾನು ಇಲ್ಲೇ ವಾಸವಾಗಿದ್ದೇನೆ ಎಂದು ಹೇಳಿದ್ದರು.

ಅಧಿಕಾರ ಹೋದ 22 ದಿನಗಳ ಬಳಿಕ ತಾಜ್ ವೆಸ್ಟೆಂಡ್​ ಹೋಟೆಲ್​ನ ಐಷಾರಾಮಿ ರೂಮನ್ನು ಖಾಲಿ ಮಾಡಿದ್ದಾರೆ. ಲಕ್ಷಾಂತರ ರೂ ಕೊಟ್ಟು ಐಷಾರಾಮಿ ಹೋಟೆಲ್​ನಲ್ಲಿ ಇರುವ ಬಗ್ಗೆ ಟೀಕಿಸಿದ್ದ ಬಿಜೆಪಿ ನಾಯಕರಿಗೆ ಉತ್ತರ ನೀಡಿದ್ದ ಹೆಚ್​.ಡಿ. ಕುಮಾರಸ್ವಾಮಿ, ಆ ಹೋಟೆಲ್​ ರೂಮಿನ  ವೆಚ್ಚವನ್ನು ಸ್ವಂತ ಹಣದಿಂದ ಭರಿಸುವುದಾಗಿ ಸ್ಪಷ್ಟಪಡಿಸಿದ್ದರು. ಅಧಿಕಾರ ಹೋದಮೇಲೂ ಕೆಲವು ದಿನಗಳ ಕಾಲ ಅದೇ ರೂಮಿನಲ್ಲಿ ಇರುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇಂದು ರೂ ಖಾಲಿ ಮಾಡಿ ಜೆಪಿ ನಗರದ ತಮ್ಮ ನಿವಾಸಕ್ಕೆ ಶಿಫ್ಟ್​ ಆಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ