ಬೆಂಗಳೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಟ್ಯಾಪಿಂಗ್ ವಿಚಾರ ಇದೀಗ ಬಿಜೆಪಿ ಹೈ ಕಮಾಂಡ್ ಅಂಗಳ ತಲುಪಿದೆ. ಕಾಂಗ್ರೆಸ್ ನಾಯಕರ ಫೋನ್ಗಳು ಟ್ಯಾಪ್ ಆಗಿರುವುದಕ್ಕೆ ಈಗಾಗಲೇ ಮೈತ್ರಿ ನಾಯಕರು ಗರಂ ಆಗಿದ್ದು, ತನಿಖೆಗೆ ಆಗ್ರಹಿಸಿದ್ದಾರೆ. ಮೈತ್ರಿ ಸರ್ಕಾರದ ವಿರುದ್ಧ ಯಾರ್ಯಾರು ಪಿತೂರಿ ನಡೆಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಿಎಂ ಆಗಿದ್ದ ಕುಮಾರಸ್ವಾಮಿ ಅವರೇ ಫೋನ್ಗಳನ್ನು ಟ್ಯಾಪಿಂಗ್ ಮಾಡಿಸಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆ ಮಾಜಿ ಸಿಎಂ ವಿರುದ್ಧ ಸಿಬಿಐ ತನಿಖೆ ನಡೆಸಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಮೈತ್ರಿ ನಾಯಕರ ವಿರುದ್ಧ ಫೋನ್ ಟ್ಯಾಪಿಂಗ್ ನಡೆಸಿದ ಕುಮಾರಸ್ವಾಮಿ ವಿರುದ್ಧ ಈಗಾಗಲೇ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಈ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಬಿಎಸ್ ಯಡಿಯೂರಪ್ಪ ಕೂಡ ಕುಮಾರಸ್ವಾಮಿ ಮೇಲೆ ಸಿಬಿಐ ತನಿಖೆ ನಡೆಸುವ ಮೂಲಕ ಅವರನ್ನು ಕಟ್ಟಿಹಾಕುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಭಾಷಣೆ ಹೊರಬರುವ ಮೂಲಕ ಮೈತ್ರಿ ಸರ್ಕಾರದಲ್ಲಿ ಫೋನ್ ಕದ್ಧಾಲಿಕೆಯಾಗಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆ ಅವರ ವಿರುದ್ಧ ತನಿಖೆ ನಡೆಸುವ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ, ಮೋದಿ ಮತ್ತು ಶಾ ಬಳಿ ಚರ್ಚೆ ನಡೆಸಲು ಸಜ್ಜಾಗಿದ್ದಾರೆ.
ಬಿಜೆಪಿ ಸರ್ಕಾರದಲ್ಲಿಯೂ ಎಚ್ಡಿಕೆ ಆಯಕಟ್ಟಿನ ಜಾಗದಿಂದ ಮಾಹಿತಿ ಪಡೆಯುವ ಸಾಧ್ಯತೆ ಇದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಬಿಜೆಪಿ ಸರ್ಕಾರ ಸುಭದ್ರವಾಗಿರಬೇಕು ಎಂದರೆ ಕುಮಾರಸ್ವಾಮಿ ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಾ ಬೇಡಾವಾ ಎಂಬ ಕುರಿತು ಬಿಎಸ್ ಯಡಿಯೂರಪ್ಪ ಚರ್ಚಿಸುವ ಸಾಧ್ಯತೆ ಇದೆ. ಬಳಿಕ ಹೈ ಕಮಾಂಡ್ ಆದೇಶದಂತೆ ಈ ಪ್ರಕರಣದ ಕುರಿತು ನಿಲುವು ತಾಳಲಿದ್ದಾರೆ ಎನ್ನಲಾಗಿದೆ.