ಬೆಂಗಳೂರು: ಕೊನೆಗೂ ಬಿಜೆಪಿ ಸರ್ಕಾರದ ಸಂಪುಟ ರಚನೆ ಕ್ಲೈಮಾಕ್ಸ್‍ಗೆ ಬಂದಿದೆ. ಆದರೆ ಈ ಕ್ಲೈಮ್ಯಾಕ್ಸ್ ನಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಮತ್ತೊಂದು ತಲೆನೋವು ಆರಂಭವಾಗಿದೆ.
ಮುಖ್ಯಮಂತ್ರಿಗಳಿಗೆ ಲಿಂಗಾಯತ ಶಾಸಕರ ಟೆನ್ಶನ್ ಆರಂಭವಾಗಿದೆ. 38 ಬಿಜೆಪಿ ಲಿಂಗಾಯತ ಶಾಸಕರಲ್ಲಿ ಯಾರಿಗೆ ಮಂತ್ರಿಗಿರಿ ಸಿಗುತ್ತದೆ ಎಂಬುದೇ ಸದ್ಯದ ಕುತೂಹಲವಾಗಿದೆ.
ಬಿಜೆಪಿಯಲ್ಲಿ ಲಿಂಗಾಯತ ಶಾಸಕರ ಸಂಖ್ಯೆ ಹೆಚ್ಚಿದ್ದು, ಸಚಿವ ಸ್ಥಾನ ಯಾರಿಗೆ ಕೊಡಬೇಕು ಯಾರಿಗೆ ಬಿಡಬೇಕು ಎಂದು ಸಿಎಂ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ. 38 ಶಾಸಕರ ಪೈಕಿ 12ಕ್ಕೂ ಹೆಚ್ಚು ಪ್ರಮುಖ ಲಿಂಗಾಯತ ಶಾಸಕರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಒಂದು ಡಜನ್‍ಗೂ ಹೆಚ್ಚಿರುವ ಲಿಂಗಾಯತ ಆಕಾಂಕ್ಷಿ ಶಾಸಕರ ಪೈಕಿ ಎಲ್ಲರೂ ಯಡಿಯೂರಪ್ಪಗೆ ಆಪ್ತರೇ ಆಗಿದ್ದಾರೆ. ಹೀಗಾಗಿ 12 ಕ್ಕೂ ಹೆಚ್ಚಿರುವ ಶಾಸಕರ ಪೈಕಿ ಯಾರಿಗೆಲ್ಲ ಸಚಿವ ಸ್ಥಾನ ಕೊಡಬೇಕು ಎಂಬ ಪ್ರಶ್ನೆ ಸಿಎಂ ಅವರನ್ನು ಕಾಡುತ್ತಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ತಲೆ ಕೆಡಿಸಿರುವ ಈ ಪ್ರಶ್ನೆಗೆ ಹೈಕಮಾಂಡ್ ಬಳಿ ಮಾತ್ರ ಉತ್ತರ ಇದೆಯಾ, ಯಡಿಯೂರಪ್ಪನವರೇ ಲಿಂಗಾಯತ ಶಾಸಕರ ಒಂದು ಫೈನಲ್ ಲಿಸ್ಟ್ ಮಾಡಿಕೊಂಡಿದ್ದಾರಾ ಅಥವಾ ಹೈಕಮಾಂಡ್ ಹೆಗಲಿಗೇ ಈ ಜವಾಬ್ದಾರಿಯನ್ನು ಹೊರಿಸ್ತಾರಾ ಎಂಬುದನ್ನು ಕಾದು ನೋಡಬೇಕು.