ಬೆಂಗಳೂರು,ಆ.15- ಕನ್ನಡಿಗರ ಸ್ವಾಭಿಮಾನ, ಆತ್ಮಗೌರವಕ್ಕೆ ಧಕ್ಕೆಯಾಗದಂತೆ ಸ್ಥಳೀಯ ಉದ್ಯೋಗಗಳಲ್ಲಿ ಮೊದಲ ಆದ್ಯತೆ ಹಾಗೂ ಅತಿವೃಷ್ಟಿ, ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಕಟಿಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
73ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬಿಎಸ್‍ವೈ, ತಮ್ಮ ಸರ್ಕಾರದ ಮುಂದಿನ ಗುರಿಗಳೇನುಂಬುದನ್ನು ಭಾಷಣದಲ್ಲಿ ತೆರೆದಿಟ್ಟರು.
20ಪುಟಗಳ ಭಾಷಣದಲ್ಲಿ ಅವರು, ಯಾವುದೇ ಹೊಸ ಯೋಜನೆಗಳನ್ನಾಗಲಿ ಇಲ್ಲವೇ ಕಾರ್ಯಕ್ರಮಗಳನ್ನು ಪ್ರಕಟಿಸದೆ ಕನ್ನಡಿಗರ ಹಿತಕಾಪಾಡುವುದು, ಅತಿವೃಷ್ಟಿಯಿಂದ ಸಂಕಷ್ಟಕ್ಕೊಳಗಾಗಿರುವ ಸಂತ್ರಸ್ತರಿಗೆ ಮೂಲಭೂತ ಸೌಕರ್ಯ ಒದಗಿಸುವುದು.ಹಾಗೂ ಕರ್ನಾಟಕವನ್ನು ಅಭಿವೃದ್ಧಿಯಲ್ಲೇ ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಶಪಥ ಮಾಡಿದರು.
ಇತ್ತೀಚೆಗೆ ಕರ್ನಾಟಕದಲ್ಲೇ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಕೂಗಿಗೆ ಸ್ಪಂದಿಸಿರುವ ಯಡಿಯೂರಪ್ಪ ಕನ್ನಡಿಗರ ಆಸ್ಮಿತೆಗೆ ಧಕ್ಕೆಯಾಗದಂತೆ ತಮ್ಮ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಸಂದೇಶವನ್ನು ರವಾನಿಸಿದ್ದಾರೆ.
ಕನ್ನಡಿಗರು ಸ್ವಾಭಿಮಾನಿಗಳು, ಅವರ ಆತ್ಮಗೌರವಕ್ಕೆ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ. ಸ್ಥಳೀಯ ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನಮ್ಮ ಸರ್ಕಾರದ ನಿಲುವು.ವಿಶ್ವದ ಯಾವುದೇ ಭಾಗದಲ್ಲಿದ್ದರೂ ಕನ್ನಡಿಗರು ಹೊಂದಿಕೊಂಡು ಹೋಗುವ ಗುಣ ಬೆಳೆಸಿಕೊಂಡಿದ್ದಾರೆ.ಇದು ಎಲ್ಲರಿಗೂ ಮಾದರಿಯಾಗಬೇಕೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಜನರ ಸೇವೆಗೆ ನನಗೆ ಮತ್ತೆ ಅವಕಾಶ ಸಿಕ್ಕಿದೆ. ರಾಜ್ಯದಲ್ಲಿ ಕನ್ನಡಿಗರು ಸ್ವಾಭಿಮಾನದಿಂದ ನೆಮ್ಮದಿಯಿಂದ ಬದುಕಬೇಕು. ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ.ಐಟಿ ಬಿಟಿ ವಿಸ್ತರಣೆ.ರಾಜ್ಯದ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಯತ್ನಿಸುತ್ತೇವೆ. ಸರ್ಕಾರಿ ಶಾಲೆಗಳು ನಮ್ಮ ಶಾಲೆ ಎಂದು ಭಾವಿಸಬೇಕು. ಇದಕ್ಕಾಗಿ ಸರ್ಕಾರ ಆದ್ಯತೆ ನೀಡಲಿದೆ. ಅನ್ನದಾತನ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ನುಡಿದರು.
ಅನ್ನದಾತರ ಹಿತ ರಕ್ಷಣೆ, ಜನ ಹಿತಕ್ಕಾಗಿ ಸರ್ಕಾರ, ಕೈಗಾರಿಕೆಗೆ ಉತ್ತೇಜನ ಕೌಶಲಾಭಿವೃದ್ಧಿ ಮತ್ತು ಉದ್ಯೋಗಸೃಷ್ಟಿ ಹಾಗೂ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ದುರ್ಬಲ ವರ್ಗದ ಕಲ್ಯಾಣವೇ ಈ ಸರ್ಕಾರದ ಗುರಿಯಾಗಿದೆ.ಕನ್ನಡಕ್ಕೆ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದರು.
ಹಾಗೆಯೇ ಜನರು ಸಮಸ್ಯೆ ಹೊತ್ತು ಬೆಂಗಳೂರಿಗೆ ಬರಬಾರದು. ಜನರ ಸಮಸ್ಯೆ ಅಯಾ ಜಿಲ್ಲೆಯಲ್ಲೇ ಬಗೆಹರಿಯಬೇಕು. ರಾಜ್ಯದ ಜನರು ನೆಮ್ಮದಿಯಿಂದ ಬದುಕಬೇಕು. ಇದಕ್ಕಾಗಿ ಸೂಚನೆ ನೀಡಿದ್ದೇನೆ.ದುರ್ಬಲ ವರ್ಗಗಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಯೋಜನೆಗಳು ಫಲಾನುಭವಿಗಳಿಗೆ ತಲುಪಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬಿಎಸ್ ವೈ ಭರವಸೆ ನೀಡಿದರು.
ಸರ್ಕಾರ ಸಿದ್ದವಿದೆ.
`ಕಾಯಕವೇ ಕೈಲಾಸ ಎಂಬ ನುಡಿಯಂತೆ ನಡೆದು ನನಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸಮೃದ್ಧ ಕರ್ನಾಟಕ ನಿರ್ಮಿಸುವ ಕನಸು ನನ್ನದು.ಪ್ರತಿಯೊಬ್ಬ ಕನ್ನಡಿಗ ನೆಮ್ಮದಿ, ಸ್ವಾಭಿಮಾನದಿಂದ ಬದುಕುವಂತಾಗಬೇಕು’ ಎನ್ನುವುದು ನನ್ನ ಆಶಯ ಎಂದು ನುಡಿದರು.
ಪ್ರವಾಹದಿಂದ ನಾಡು ತತ್ತರಿಸಿದೆ.ನಾವು ನೀವು ಸೇರಿ ಸಂತ್ರಸ್ಥರ ರಕ್ಷಣೆಗೆ ನಿಲ್ಲೋಣ.ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ದಿನವೇ ಅಧಿಕಾರಿಗಳ ಸಭೆ ನಡೆಸಿ ಜನರ ಅಭಿವೃದ್ಧಿಗಾಗಿ ಚರ್ಚೆ ಮಾಡಿದ್ದೇನೆ. ಪ್ರಕೃತಿ ವಿಕೋಪ ಮತ್ತು ಅತಿವೃಷ್ಟಿ, ಅನಾವೃಷ್ಟಿ ಎದುರಿಸಲು ನನ್ನ ಸರ್ಕಾರ ಸಿದ್ಧವಿದೆ.ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದೇನೆ. ಸುಮಾರು ಅರ್ಧ ರಾಜ್ಯ ಜಲಪ್ರಳಯ ಆಗಿದೆ.103 ತಾಲೂಕುಗಳು ಭೀಕರ ಪ್ರವಾಹಕ್ಕೆ ತುತ್ತಾಗಿದೆ.5 ಜಿಲ್ಲೆ ಭಾಗದಲ್ಲಿ ಮಳೆ ಇಲ್ಲದೆ ಬರದ ಪರಿಸ್ಥಿತಿಯೂ ಇದೆ.ಪ್ರವಾಹದಲ್ಲಿ 61 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಕೇಂದ್ರಕ್ಕೆ ಅಗತ್ಯ ನೆರವು ಕೇಳಿದ್ದೇವೆ, ಖುದ್ದು ಕೇಂದ್ರದ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಡಿ ವಿ ಸದಾನಂದಗೌಡ ಮತ್ತು ಸುರೇಶ್ ಅಂಗಡಿ ಬಂದು ಪರಿಶೀಲನೆ ಮಾಡಿದ್ದಾರೆ.ಪ್ರವಾಹದಲ್ಲಿ ಮೃತಪಟ್ಟ ಕುಟುಂಬದವರಿಗೆ 5 ಲಕ್ಷ ರೂ ಪರಿಹಾರ.ಪ್ರವಾಹ ಸಂತ್ರಸ್ತರಿಗೆ 10 ಸಾವಿರ ರೂ, ಮನೆ ಸಂಪೂರ್ಣ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ ನೀಡಲಾಗುತ್ತದೆ.ಪ್ರತಿ ಪಕ್ಷಗಳೂ ಸರ್ಕಾರದ ಪರಿಹಾರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿವೆ ಎಂದು ಹೇಳಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಹೆಚ್ಚುವರಿ 4 ಸಾವಿರ ನೆರವು ಕೊಡುತ್ತಿದ್ದೇವೆ. ಜನರ ಹಿತಕ್ಕಾಗಿ ಸರ್ಕಾರದಿಂದ ಬೆಂಬಲ ಬೆಲೆ ಘೋಷಣೆ ಮಾಡುತ್ತೇವೆ. ಸಕಾಲದಲ್ಲಿ ಖರೀದಿ ಕೇಂದ್ರ ತೆರೆಯಲು ಸರ್ಕಾರ ಬದ್ಧವಾಗಿದೆ,ರಾಜ್ಯದಲ್ಲಿ ನೀರಾವರಿ ಸೌಲಭ್ಯದ ಹೆಚ್ಚಳಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ರೈತರಿಗೆ ವ್ಯವಸ್ಥಿತ ಮತ್ತು ವೈಜ್ಞಾನಿಕ ಗೋದಾಮು ಸೌಕರ್ಯ ಕಲ್ಪಿಸುತ್ತೇವೆ. ಕೈಗಾರಿಕೆಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾವರಣದ ಸೃಷ್ಟಿ ಮಾಡುವ ನಿಟ್ಟಿನಲ್ಲಿ ನೂತನ ಕೈಗಾರಿಕಾ ನೀತಿಯನ್ನು ರೂಪಿಸುತ್ತೇವೆ. 2019-24 ರ ನೂತನ ಜವಳಿ ಮತ್ತು ಶುದ್ಧ ಉಡುಪು ನೀತಿಯನ್ನು ಜಾರಿಗೊಳಿಸಲಿದ್ದೇವೆ ಎಂದು ಹೇಳಿದರು.
ನಗರ ಪ್ರದೇಶಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ
ನಗರೀಕರಣ ವ್ಯಾಪಕವಾಗಿದೆ.ನಗರ ಪ್ರದೇಶಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.ನಗರ ಪ್ರದೇಶಗಳ ವಿಸ್ತರಣೆ ನಿಲ್ಲಿಸಬೇಕಿದೆ.
ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ದಿಗೆ ಮೊದಲ ಆದ್ಯತೆ ನೀಡಲಾಗುವುದು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದರು. ಸಾವಿರಾರು ವರ್ಷಗಳ ಇತಿಹಾಸ ,ಪರಂಪರೆ ಹೊಂದಿರುವ ತಾಣಗಳ ರಕ್ಷಣೆಗೆ ಆದ್ಯತೆ ನೀಡಿದ್ದೇವೆ. ಈಗಾಗಲೇ ಇನ್ಫೊಸಿಸ್ ಸುಧಾಮೂರ್ತಿಯವರ ನೇತೃತ್ವದಲ್ಲಿ ಪ್ರವಾಸೋದ್ಯಮ ಕಾರ್ಯಪಡೆ ರಚಿಸಿದ್ದೇವೆ. ಸುಸ್ಥಿರ ಪ್ರವಾಸೋದ್ಯಮದ ಅಭಿವೃದ್ಧಿ ನಮ್ಮ ಗುರಿ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ರೈತರ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧ ಎಂದು ಹೇಳಿದರು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370 ರದ್ದು ಸ್ವಾಗತಿಸಿದ ಸಿಎಂ, ಕಾಶ್ಮೀರ ವಿಷಯದಲ್ಲಿ ಕೇಂದ್ರ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಯಡಿಯೂರಪ್ಪ ಶ್ಲಾಘೀಸಿದರು.
ಧ್ವಜಾರೋಹಣಕ್ಕಿಂತ ಮೊದಲು ಸಿಎಂ ಅವರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಬಳಿಕ ಗೌರವ ರಕ್ಷೆ ಸ್ವೀಕಾರ ಪಥಸಂಚಲದಲ್ಲಿ ಕೆ ಎಸ್ ಆರ್ ಪಿ, ಸ್ಕೌಟ್ಸ್, ಗೈಡ್ಸ್, ಎನ್ ಸಿಸಿ, ಸೇವಾದಳ ಹಾಗೂ ಶಾಲಾ ಮಕ್ಕಳನೊಳಗೊಂಡ ಕವಾಯತು ಮತ್ತು ಬ್ಯಾಂಡ್ ನ 34 ತುಕಡಿಗಳಲ್ಲಿ ಸುಮಾರು 1130 ಮಂದಿ ಭಾಗಿಯಾಗಿದ್ದರು.