ಬೆಂಗಳೂರು: 73 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪ್ರವಾಹದಲ್ಲಿ ಮೃತಪಟ್ಟ ಕುಟುಂಬಕ್ಕೆ ಮತ್ತು ಮನೆ ಕಳೆದುಕೊಂಡವರಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಈ ವೇಳೆ ಮಾತನಾಡಿದ ಬಿಎಸ್ವೈ ನಾಡ ಬಾಂಧವರೇ ನಿಮ್ಮಗೆಲ್ಲರಿಗೂ 73 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಮಹಾತ್ಮ ಗಾಂಧಿ ಹೇಳಿದಂತೆ ಸ್ವಾತಂತ್ರ್ಯ ಉಸಿರಾಟದಷ್ಟೇ ಅಮೂಲ್ಯವಾದದ್ದು, ಗಾಂಧಿ 150 ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಸಂದೇಶ ನೀಡುವ ಅವಕಾಶ ಸಿಕ್ಕಿದು ಸಂತೋಷ ತಂದಿದೆ. ನಮಗೆ ಅಭಿವೃದ್ಧಿ ಆಡಳಿತದ ಮಂತ್ರ ಎಂದು ಹೇಳಿದರು.
ಕನ್ನಡಿಗರಿಗೆ ಉದ್ಯೋಗಕ್ಕೆ ಪ್ರಾತಿನಿಧ್ಯ ನೀಡುವುದು ಈ ಸರ್ಕಾರದ ಮೊದಲ ಆದ್ಯತೆ ಮತ್ತು ನಿಲುವು ಆಗಿದೆ. ಕನ್ನಡಿಗರ ಉದ್ಯೋಗ ಅವಕಾಶದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸುತ್ತೇವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಹೆಚ್ಚುವರಿ 4 ಸಾವಿರ ನೆರವು ಕೊಡುತ್ತಿದ್ದೇವೆ. ಜನರ ಹಿತಕ್ಕಾಗಿ ಸರ್ಕಾರದಿಂದ ಬೆಂಬಲ ಬೆಲೆ ಘೋಷಣೆ ಮಾಡುತ್ತೇವೆ. ಸಕಾಲದಲ್ಲಿ ಖರೀದಿ ಕೇಂದ್ರ ತೆರೆಯಲು ಸರ್ಕಾರ ಬದ್ಧ ಎಂದು ತಿಳಿಸಿದರು.
ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ದಿನವೇ ಅಧಿಕಾರಿಗಳ ಸಭೆ ನಡೆಸಿ ಜನರ ಅಭಿವೃದ್ಧಿಗಾಗಿ ಚರ್ಚೆ ಮಾಡಿದ್ದೇನೆ. ಪ್ರಕೃತಿ ವಿಕೋಪ ಮತ್ತು ಅತಿವೃಷ್ಟಿ, ಅನಾವೃಷ್ಟಿ ಎದುರಿಸಲು ನನ್ನ ಸರ್ಕಾರ ಸಿದ್ಧವಿದೆ. ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದೇನೆ. ಸುಮಾರು ಅರ್ಧ ರಾಜ್ಯ ಜಲಪ್ರಳಯ ಆಗಿದೆ. 103 ತಾಲೂಕುಗಳು ಭೀಕರ ಪ್ರವಾಹಕ್ಕೆ ತುತ್ತಾಗಿದೆ. 5 ಜಿಲ್ಲೆ ಭಾಗದಲ್ಲಿ ಮಳೆ ಇಲ್ಲದೆ ಬರದ ಪರಿಸ್ಥಿತಿಯೂ ಇದೆ. ಪ್ರವಾಹದಲ್ಲಿ 61 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಕೇಂದ್ರಕ್ಕೆ ಅಗತ್ಯ ನೆರವು ಕೇಳಿದ್ದೇವೆ, ಖುದ್ದು ಕೇಂದ್ರದ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಡಿ ವಿ ಸದಾನಂದಗೌಡ ಮತ್ತು ಸುರೇಶ್ ಅಂಗಡಿ ಬಂದು ಪರಿಶೀಲನೆ ಮಾಡಿದ್ದಾರೆ. ಪ್ರವಾಹದಲ್ಲಿ ಮೃತಪಟ್ಟ ಕುಟುಂಬದವರಿಗೆ 5 ಲಕ್ಷ ರೂ ಪರಿಹಾರ. ಪ್ರವಾಹ ಸಂತ್ರಸ್ತರಿಗೆ 10 ಸಾವಿರ ರೂ, ಮನೆ ಸಂಪೂರ್ಣ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ ನೀಡಲಾಗುತ್ತದೆ. ಪ್ರತಿ ಪಕ್ಷಗಳೂ ಸರ್ಕಾರದ ಪರಿಹಾರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿವೆ ಎಂದು ಹೇಳಿದರು.
ರಾಜ್ಯದಲ್ಲಿ ನೀರಾವರಿ ಸೌಲಭ್ಯದ ಹೆಚ್ಚಳಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ರೈತರಿಗೆ ವ್ಯವಸ್ಥಿತ ಮತ್ತು ವೈಜ್ಞಾನಿಕ ಗೋದಾಮು ಸೌಕರ್ಯ ಕಲ್ಪಿಸುತ್ತೇವೆ. ಕೈಗಾರಿಕೆಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾವರಣದ ಸೃಷ್ಟಿ ಮಾಡುವ ನಿಟ್ಟಿನಲ್ಲಿ ನೂತನ ಕೈಗಾರಿಕಾ ನೀತಿಯನ್ನು ರೂಪಿಸುತ್ತೇವೆ. 2019-24 ರ ನೂತನ ಜವಳಿ ಮತ್ತು ಶುದ್ಧ ಉಡುಪು ನೀತಿಯನ್ನು ಜಾರಿಗೊಳಿಸಲಿದ್ದೇವೆ ಎಂದು ಹೇಳಿದರು.
ಧ್ವಜಾರೋಹಣಕ್ಕಿಂತ ಮೊದಲು ಸಿಎಂ ಅವರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಬಳಿಕ ಗೌರವ ರಕ್ಷೆ ಸ್ವೀಕಾರ ಪಥಸಂಚಲದಲ್ಲಿ ಕೆ ಎಸ್ ಆರ್ ಪಿ, ಸ್ಕೌಟ್ಸ್, ಗೈಡ್ಸ್, ಎನ್ ಸಿಸಿ, ಸೇವಾದಳ ಹಾಗೂ ಶಾಲಾ ಮಕ್ಕಳನೊಳಗೊಂಡ ಕವಾಯತು ಮತ್ತು ಬ್ಯಾಂಡ್ ನ 34 ತುಕಡಿಗಳಲ್ಲಿ ಸುಮಾರು 1130 ಮಂದಿ ಭಾಗಿಯಾಗಿದ್ದರು.