ಮೋದಿ ಕೆಂಪುಕೋಟೆ ಮೇಲೆ ನಿಂತು ದೇಶಕ್ಕೆ ನೀಡಿದ ಸಂದೇಶವೇನು?

ನವದೆಹಲಿ: 73 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕಮಾನುಗಳಿಂದ ಸತತ ಆರನೇ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೊಸ ಸರ್ಕಾರ ರಚಿಸಲು ಚುನಾವಣೆ ನಡೆದು ಕೇವಲ 10 ವಾರಗಳು ಕಳೆದಿವೆ, ಆದರೆ ಈ ಮಧ್ಯೆ ಸರ್ಕಾರ 370 ಮತ್ತು 35 ಎ ಆರ್ಟಿಕಲ್ ಅನ್ನು ತೆಗೆದುಹಾಕಿದೆ, ಸರ್ದಾರ್ ಪಟೇಲ್ ಅವರ ಕನಸನ್ನು ಈಡೇರಿಸಿದೆ. 70 ವರ್ಷಗಳಲ್ಲಿ ಮಾಡದ ಕೆಲಸ, ಅದನ್ನು 70 ದಿನಗಳಲ್ಲಿ ನಾವು ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.

ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಜನರ ಆಸೆ ಹಾಗೂ ಆಕಾಂಕ್ಷೆಯನ್ನು ಪೂರ್ಣಗೊಳಿಸುವುದು ನಮ್ಮ ಜವಾಬ್ದಾರಿ. ಸಂವಿಧಾನದ ವಿಧಿ 370 ರದ್ದು ಮಾಡಿದ್ದನ್ನು ರಾಜಕೀಯವಾಗಿ ಬಳಕೆ ಮಾಡುವುದು ಸರಿಯಲ್ಲ. ಒಂದು ವೇಳೆ 370ನೇ ವಿಧಿ ಅಷ್ಟು ಮುಖ್ಯ ಎನ್ನುವುದೇ ಆಗಿದ್ದರೆ ಅದನ್ನು ತಾತ್ಕಾಲಿಕವಾಗಿ ಏಕೆ ಇಟ್ಟಿರಿ? ನಿಮಗೆ ಅಷ್ಟೊಂದು ಬಹುಮತ ಇದ್ದಾಗಲೂ 370ನೇ ವಿಧಿಯನ್ನು ಶಾಶ್ವತವಾಗಿ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜಲ ಜೀವನ್ ಮಿಷನ್ ಯೋಜನೆಯಿಂದಾಗಿ ದೇಶದ ಪ್ರತಿ ಮನೆ ಮನೆಗೂ ನಲ್ಲಿಯ ಮೂಲಕ ನೀರು ಪೂರೈಕೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶದಲ್ಲಿರುವ ಬಡತನವನ್ನು ಹಾಗೂ ಬಡವರ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವತಿಯಿಂದ 2022ರ ವೇಳೆಗೆ ಪ್ರತಿ ಬಡವರಿಗೂ ಶಾಶ್ವತ ಮನೆ ನೀಡಲಾಗುತ್ತದೆ. 100 ಲಕ್ಷ ಕೋಟಿ ರೂ.ವನ್ನು ಮೂಲ ಸೌಕರ್ಯಕ್ಕೆ ಹಾಗೂ ಜಲ ಜೀವನ್ ಮೀಷನ್ ಯೋಜನೆಗೆ 3.5 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದರು.

ನನಗಾಗಿ ಏನನ್ನೂ ಮಾಡಿಕೊಳ್ಳಲು ಅಧಿಕಾರಕ್ಕೆ ಬಂದಿಲ್ಲ. ನಾವು ಸಮಸ್ಯೆಗಳನ್ನು ಸಾಕಲ್ಲ, ದೂರ ತಳ್ಳುವುದೂ ಇಲ್ಲ. ಬದಲಾಗಿ ಅವುಗಳನ್ನು ಬಗೆಹರಿಸುತ್ತೇವೆ. ನಮ್ಮ ದೇಶವು ಬದಲಾವಣೆ ಕಾಣುತ್ತಿದೆ ಹಾಗೂ ಅಭಿವೃದ್ಧಿಯಾಗುತ್ತಿದೆ ಎಂದು ದೇಶದ ಸಾಮಾನ್ಯ ವ್ಯಕ್ತಿಯೂ ಹೇಳುತ್ತಿದ್ದಾರೆ. 130 ಕೋಟಿ ಜನರ ಮುಖದ ಮೇಲಿನ ಉತ್ಸಾಹ ನನಗೆ ಹೊಸ ಶಕ್ತಿ ತುಂಬಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಸಂದರ್ಭದ ನಡುವೆ ದೇಶದ ಹಲವು ಭಾಗಗಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮಳೆ ಹಾಗೂ ಪ್ರವಾಹದಿಂದ ಭಾರೀ  ನಷ್ಟ ಉಂಟಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಸಂತ್ರಸ್ತರ ಅಭಿವೃದ್ಧಿಗೆ ಶ್ರಮಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ನೀಡಿದ್ದ 370ನೇ ಹಾಗೂ 35 (ಎ) ವಿಧಿಗಳನ್ನು ರದ್ದು ಮಾಡಿದ್ದೇವೆ. ಮುಸ್ಲಿಂ ಸಹೋದರಿಯರು ಹಾಗೂ ತಾಯಂದಿರಿಗಾಗಿ ತ್ರಿವಳಿ ತಲಾಖ್ ರದ್ದು ಮಾಡಲಾಗಿದೆ. ರೈತರಿಗಾಗಿ ಪ್ರಧಾನಿ ಮಂತ್ರಿ ಕಿಸಾನ್ ಯೋಜನೆ, ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಜಾರಿಗೆ ತಂದಿದ್ದೇವೆ. ವೈದ್ಯಕೀಯ ಶಿಕ್ಷಣವನ್ನು ಪಾರದರ್ಶಕತೆ ಮಾಡಲಾಗಿದೆ. ಜಲ ಸಮಸ್ಯೆ ನಿವಾರಣೆಗಾಗಿ ಜಲಶಕ್ತಿ ಮಂತ್ರಾಲಯ ಆರಂಭಿಸಿದ್ದೇವೆ. ಈ ಮೂಲಕ ದೇಶದ ಅಭಿವೃದ್ಧಿಗೆ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಎನ್‍ಡಿಎ ನೇತೃತ್ವದ ಸರ್ಕಾರವು ಜಾರಿಗೆ ತಂದಿದೆ ಎಂದರು.

ಅತ್ಯಾಚಾರಿಗಳಿಗೆ ಕಠಿಣ ನೀಡುವ ಕಾನೂನು ಜಾರಿಗೆ ತಂದಿದ್ದೇವೆ. ದೇಶದ ಪ್ರತಿಯೊಬ್ಬರ ಏಳಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ಹಂತ ಹಂತವಾಗಿ ಭಾರತವು ಅಭಿವೃದ್ಧಿ ಹೊಂದುತ್ತಿದೆ ಎಂದು ದೇಶದ ಜನರಿಗೆ ತಿಳಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತಮ್ಮ ಜೀವನನ್ನೇ ತ್ಯಾಗ ಮಾಡಿದ್ದಾರೆ. ಅವರಿಗೆ ನನ್ನ ನಮನಗಳು. ಕೆಲ ನಾಯಕರು ತಮ್ಮ ಯೌವನವನ್ನು ಜೈಲಿನಲ್ಲಿ ಕಳೆದರು. ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ನನ್ನ ನಮನಗಳು ಎಂದರು.

ನಮ್ಮ ಮುಸ್ಲಿಂ ಹೆಣ್ಣು ಮಕ್ಕಳ ತಲೆಯ ಮೇಲೆ ತ್ರಿವಳಿ ತಲಾಖ್ ತೂಗುಗತ್ತಿ ಇತ್ತು. ಹೀಗಾಗಿ ಅವರು ಭಯದಲ್ಲಿಯೇ ಜೀವನ ನಡೆಸುತ್ತಿದ್ದರು. ಈ ನಿಟ್ಟಿನಲ್ಲಿ ತ್ರಿವಳಿ ತಲಾಖ್, ಬಾಲ್ಯವಿವಾಹ, ಅತ್ಯಾಚಾರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಕಠಿಣ ಕಾನೂನು ಅವಶ್ಯಕವಾಗಿತ್ತು. ಅದನ್ನು ನಮ್ಮ ಸರ್ಕಾರ ಈಡೇರಿಸಿದೆ ಎಂದರು.
ಜನಸಂಖ್ಯಾ ಸ್ಫೋಟ ಮಿತಿ ಮೀರಿ ಹೋಗುತ್ತಿದೆ. ಮುಂದಿನ ಪೀಳಿಗೆಗೆ ಇದು ದೊಡ್ಡ ಸವಾಲು ಒಡ್ಡಲಿದೆ. ಮಗುವಿಗೆ ಜನ್ಮ ನೀಡುವ ಮುನ್ನ ಯೋಚಿಸಿ, ಮುಗುವಿನ ಎಲ್ಲ ಅವಶ್ಯಕತೆ ಪೂರೈಸಬಹುದೇ ಎಂಬುದನ್ನು ಯೋಚಿಸಿ ನಿರ್ಣಯ ಕೈಗೊಳ್ಳಿ ಎಂದು ಇದೇ ವೇಳೆ ಪ್ರಧಾನಿಯವರು ದೇಶದ ಜನರಲ್ಲಿ ಮನವಿ ಮಾಡಿಕೊಂಡರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ