
ಬೆಂಗಳೂರು, ಆ.10- ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಕೆಎಸ್ಆರ್ಟಿಸಿಯ ಹಲವು ಮಾರ್ಗಗಳ ಬಸ್ ಸೇವೆಯನ್ನು ಇಂದು ಕೂಡ ಸ್ಥಗಿತಗೊಳಿಸಲಾಗಿದೆ.
ಎಲ್ಲೆಲ್ಲಿ ರಸ್ತೆಗಳು ಬಸ್ ಸಂಚಾರಕ್ಕೆ ಯೋಗ್ಯವಾಗಿವೆ ಆ ಮಾರ್ಗಗಳಲ್ಲಿ ಮಾತ್ರ ಬಸ್ ಸೇವೆ ಒದಗಿಸಲಾಗುತ್ತಿದೆ. ಪ್ರವಾಹ ಹಾಗೂ ಭೂ ಕುಸಿತ ಉಂಟಾಗಿರುವ ಕಡೆಗಳಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸಕಲೇಶಪುರ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಚಾರ್ಮುಡಿ, ಶಿರಾಡಿಘಾಟ್ನಲ್ಲಿನ ಬಸ್ ಸಂಚಾರ ಸ್ಥಗಿತವಾಗಿದೆ. ಭೂ ಕುಸಿತದಿಂದಾಗಿ ಕೆಲವು ರಸ್ತೆಗಳನ್ನು ಮುಚ್ಚಲಾಗಿದೆ.
ಕಳಸ, ಹೊರನಾಡು, ಮೂಡಿಗೆರೆ, ಬೇಲೂರು, ಚಿಕ್ಕಮಗಳೂರು ಮಾರ್ಗದಲ್ಲೂ ಕೂಡ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಎಲ್ಲ ಸ್ಥಳೀಯ ಬಸ್ ಸೇವೆಯನ್ನು ರದ್ದುಪಡಿಸಲಾಗಿದೆ. ಆದರೆ, ಸಾರ್ವಜನಿಕರ ಬೇಡಿಕೆಗನುಗುಣವಾಗಿ ಬಸ್ ಸೇವೆ ಒದಗಿಸಲಾಗುವುದು ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಕಪಿಲಾ ನದಿಗೆ ಬಿಟ್ಟಿರುವುದರಿಂದ ನಂಜನಗೂಡು ಮತ್ತು ಮೈಸೂರು ನಡುವಿನ ರಸ್ತೆ ಮುಚ್ಚಲ್ಪಟ್ಟಿದೆ. ಹೀಗಾಗಿ ಆ ಮಾರ್ಗದ ಎಲ್ಲ ಬಸ್ಗಳ ಸೇವೆಯನ್ನು ಟಿ.ನರಸೀಪುರ ಮಾರ್ಗವಾಗಿ ಚಲಿಸಲು ಸೂಚಿಸಲಾಗಿದೆ.
ರಾಮನಾಥಪುರ-ಕಣ್ಣೂರು ರಸ್ತೆ ಸಂಪರ್ಕ ಕಡಿದುಹೋಗಿದೆ. ಹಾಗೆಯೇ ಕುಶಾಲನಗರ, ಮಡಿಕೇರಿ ಮಾರ್ಗದ ಬಸ್ಗಳ ಸೇವೆಯನ್ನು ನಿಲ್ಲಿಸಲಾಗಿದೆ. ರುದ್ರಪಟ್ಟಣ ಮಾರ್ಗದ ಬಸ್ ಸೇವೆಯನ್ನು ರದ್ದುಪಡಿಸಲಾಗಿದೆ.
ಹೊಳೆನರಸೀಪುರ-ಚನ್ನರಾಯಪಟ್ಟಣ ಮಾರ್ಗದ ರಸ್ತೆಯೂ ಮುಚ್ಚಲ್ಪಟ್ಟಿರುವುದರಿಂದ ಗಾಣಿಗಟ್ಟ ಮಾರ್ಗದ ಬಸ್ಗಳು ಅಗ್ರಹಾರದ ಮಾರ್ಗವಾಗಿ ಚಲಿಸುತ್ತಿವೆ. ಉಪ್ಪಿನಂಗಡಿ-ನೆಲ್ಯಾಡಿ ಮಾರ್ಗವು ಸಂಪರ್ಕ ಕಡಿದುಹೋಗಿರುವುದರಿಂದ ಕಟೀಲು-ಧರ್ಮಸ್ಥಳ-ಮಂಗಳೂರು ರಸ್ತೆ ಮಾರ್ಗವೂ ಮುಚ್ಚಲ್ಪಟ್ಟಿದೆ.
ಚಿತ್ರದುರ್ಗ-ಶಿವಮೊಗ್ಗ ನಡುವಿನ ರಸ್ತೆ ಸಂಪರ್ಕವೂ ಕೂಡ ಅಸ್ತವ್ಯಸ್ತವಾಗಿದ್ದರೆ, ನರಸೀಪುರ-ಚಾಮರಾಜನಗರ ನಡುವಿನ ಸಂಪರ್ಕವೂ ಕಡಿದುಹೋಗಿದ್ದು, ಕುರಹಟ್ಟಿ-ಹೆಮ್ಮರಗಾಲ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಂಜನಗೂಡು-ಗುಂಡ್ಲುಪೇಟೆ ನಡುವಿನ ಬಸ್ ಸೇವೆಯನ್ನು ಹುಲ್ಲಳ್ಳಿ-ಹುರಾ ಗ್ರಾಮದ ಮೂಲಕ ಒದಗಿಸಲಾಗಿದೆ. ಸುಲ್ತಾನ್ ಬತೇರಿ, ಕ್ಯಾಲಿಕಟ್, ತ್ರಿಶೂರ್, ಧರ್ಮಸ್ಥಳ ಮಾರ್ಗದ ಬಸ್ಗಳನ್ನು ನಿಲ್ಲಿಸಲಾಗಿದೆ.
ತುಂಗಭದ್ರಾ ಜಲಾಶಯದ ಹಿನ್ನೀರು ಪ್ರವಾಹದಿಂದಾಗಿ ಹರಿಹರ ಸುತ್ತಮುತ್ತಲ ರಸ್ತೆಗಳು ಜಲಾವೃತಗೊಂಡಿವೆ. ಹೀಗಾಗಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಬಿ.ಸಿ.ರೋಡ್-ಧರ್ಮಸ್ಥಳ ಮಾರ್ಗದ ರಸ್ತೆ ನೆಲ್ಯಾಡಿ ಬಳಿ ಪ್ರವಾಹದಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಶಿವಮೊಗ್ಗ-ಹೊನ್ನಾಳಿ ನಡುವಿನ ರಸ್ತೆಯಲ್ಲಿ ತುಂಗಾನದಿ ನೀರು ಹರಿಯುತ್ತಿರುವುದರಿಂದ ಬಸ್ ಸೇವೆ ಸ್ಥಗಿತವಾಗಿದೆ.
ಕೊಲ್ಲೂರು-ಶಿವಮೊಗ್ಗ ನಡುವಿನ ಸಂಪೆಕಟ್ಟೆ ರಸ್ತೆ ಕೊಚ್ಚಿಹೋಗಿದ್ದು, ಸಂಪರ್ಕ ಕಡಿತವಾಗಿದೆ. ಹೀಗಾಗಿ ಸಿಗಂದೂರಿಗೆ ಬರದಂತೆ ಮನವಿ ಮಾಡಲಾಗಿದೆ.