ಬೆಂಗಳೂರು,ಆ.8- ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಯಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ರಾಜ್ಯ ಸರ್ಕಾರವೇ ಮನೆ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ನೆರವು ನೀಡಲು ಸಿದ್ದವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿರುವುದು ತಮ್ಮ ಗಮನಕ್ಕೆ ಬಂದಿದೆ. ಸಂಕಷ್ಟಕ್ಕೊಳಗಾಗಿರುವ ಜನರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ಮನೆ ಕಳೆದುಕೊಂಡಿದ್ದರೆ ಅಂಥವರಿಗೆ ಕೇಂದ್ರದ ಎನ್‍ಡಿಆರ್‍ಎಫ್ ಹಾಗೂ ರಾಜ್ಯ ಸರ್ಕಾರದ ಎಸ್‍ಡಿಆರ್‍ಎಫ್ ಯೋಜನೆಯಡಿ ಮನೆ ನಿರ್ಮಾಣ ಮಾಡಲಾಗುವುದು. ಆಸ್ತಿಪಾಸ್ತಿ, ಬೆಳೆನಷ್ಟವಾಗಿದ್ದರೆ ಸರ್ಕಾರದ ವತಿಯಿಂದಲೇ ಪರಿಹಾರ ನೀಡುವುದಾಗಿ ತಿಳಿಸಿದರು.
ಪ್ರವಾಹದಲ್ಲಿ ಸಿಕ್ಕಿ ಮೃತಪಟ್ಟವರ ಕುಟುಂಬಕ್ಕೆ ಐದು ಲಕ್ಷ ಪರಿಹಾರವನ್ನು ನೀಡುವುದಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ. ಸರ್ಕಾರವೇ ನಿಮ್ಮೊಂದಿಗೆ ಇರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ನಾನು ಇನ್ನು ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದೇನೆ. ಎಲ್ಲೆಲ್ಲಿ ಮಳೆಯಿಂದ ಹಾನಿ ಉಂಟಾಗಿದೆಯೋ ಅಂತಹ ಕಡೆ ಭೇಟಿ ನೀಡುತ್ತೆನೆ. ನನ್ನ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿ ಸಂತ್ರಸ್ತರ ನೆರವಿಗೆ ನಿಲ್ಲುತ್ತೇನೆ ಎಂದರು.
ಸಚಿವರು ಇಲ್ಲ ಎಂಬ ಮನೋಭಾವನೆ ಬೇಡ. ಖುದ್ದು ಮುಖ್ಯಮಂತ್ರಿಗಳೇ ಬಂದಿರುವಾಗ ಆ ಪ್ರಶ್ನೆಯೇ ಉದ್ಭವಿಸಬಾರದು ಎಂದು ನೆರೆದಿದ್ದವರಿಗೆ ನೆರವು ನೀಡುವ ಭರವಸೆ ನೀಡಿದರು.
ಅಗತ್ಯವಿರುವ ಕಡೆ ಗಂಜಿ ಕೇಂದ್ರಗಳನ್ನು ತೆರೆಯಬೇಕು. ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಠೇವಣಿ ಹಣವನ್ನು ಪರಿಹಾರ ಕೇಂದ್ರಕ್ಕೆ ಬಳಸಿಕೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಬಿಟ್ಟು ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಸೂಚಿಸಿದರು.
ತಂಡ ರಚನೆ:
ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವರಾದ ಕೆ.ಎಸ್.ಈಶ್ವಪ್ಪ , ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಸಿ.ಎಂ.ಉದಾಸೀ, ಮೇಲ್ಮನೆ ಹಿರಿಯ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.