ತುಮಕೂರು, ಮಾ.30-ಚಿರತೆ ಹಾವಳಿಯಿಂದ ಕಂಗಾಲಾಗಿದ್ದ ತಾಲೂಕಿನ ಜನತೆ ಇದೀಗ ವೈರಲ್ ಆಗಿರುವ ಹುಲಿ ರಸ್ತೆ ದಾಟುವ ಫೋಟೋದಿಂದ ಮತ್ತಷ್ಟು ಭಯಭೀತರಾಗಿದ್ದಾರೆ.
ಮಧುಗಿರಿ-ಪಾವಗಡ ರಸ್ತೆಯ ಸೂಜಿನಹಳ್ಳಿ ಬಳಿ ರಸ್ತೆ ದಾಟುತ್ತಿದ್ದ ಹುಲಿ ಫೋಟೋವನ್ನು ಗ್ರಾಮಸ್ಥರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಮುದ್ದೇನಹಳ್ಳಿ, ಜೆ.ಸಿ.ಪಾಳ್ಯ, ಮೂರಿಡಿಕೆರೆ, ಬಂಡಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
ಈ ಬಗ್ಗೆ ಅರಣ್ಯಾಧಿಕಾರಿಗಳು ಮತ್ತು ಜಿಲ್ಲಾಡಳಿತದ ಗಮನಕ್ಕೂ ತರಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹುಲಿಗಾಗಿ ಶೋಧ ನಡೆಸಿದ್ದಾರೆ.
ಅರಣ್ಯ ಇಲಾಖೆ ಸ್ಪಷ್ಟೀಕರಣ: ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಗ್ರಾಮ ಪರಿಶೀಲನೆ ನಡೆಸಿದ್ದು, ಮಧುಗಿರಿಯ ಸುತ್ತಮುತ್ತ ಎಲ್ಲಿಯೂ ಹುಲಿಯ ಹೆಜ್ಜೆ ಪತ್ತೆಯಾಗಿಲ್ಲ. ಆದರೂ ನಾವು ಹುಲಿಗಾಗಿ ಶೋಧ ನಡೆಸುತ್ತೇವೆ. ಗ್ರಾಮಸ್ಥರು ಯಾವುದೇ ಆತಂಕ ಪಡಬಾರದು ಎಂದು ತಿಳಿಸಿದ್ದಾರೆ.