ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ-ಭಾರೀ ಪ್ರವಾಹ-ಯಡಿಯೂರಪ್ಪ ದೆಹಲಿ ಪ್ರವಾಸ ಮೊಟಕು

ಬೆಂಗಳೂರು,ಆ.7- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿ ಪ್ರವಾಸ ಮೊಟಕುಗೊಳಿಸಿದ್ದು, ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗಿದೆ.

ಈ ದಿಢೀರ್ ಬೆಳವಣಿಗೆಯಿಂದಾಗಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ನಿರಾಸೆ ಉಂಟಾಗಿದೆ. ಶುಕ್ರವಾರ ನಡೆಯಬೇಕಿದ್ದ ಸಚಿವ ಸಂಪುಟ ವಿಸ್ತರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲ್ಪಟ್ಟಿದೆ.

ಮೂಲಗಳ ಪ್ರಕಾರ ಬಿಎಸ್‍ವೈ ಆ.12ರಂದು ನವದೆಹಲಿಗೆ ತೆರಳಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಮತ್ತಿತರ ನಾಯಕರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಮಾಡಲು ಅನುಮತಿ ಪಡೆಯಲಿದ್ದಾರೆ.

ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ತೀವ್ರ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಅವರ ಅಂತಿಮ ವಿಧಿವಿಧಾನಗಳಲ್ಲಿ ಬಿಜೆಪಿ ನಾಯಕರು ತೊಡಗಿಕೊಂಡಿದ್ದಾರೆ. ಇಂದು ಅಮಿತ್ ಷಾ ಅವರನ್ನು ಯಡಿಯೂರಪ್ಪ ಭೇಟಿಯಾಗಿ ಮಾತುಕತೆ ನಡೆಸಬೇಕಾಗಿತ್ತಾದರೂ ಕೊನೆ ಕ್ಷಣದಲ್ಲಿ ರದ್ದಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂದು ರಾಷ್ಟ್ರೀಯನಾಯಕರು ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸಂಜೆ ನಗರಕ್ಕೆ ಹಿಂತಿರುಗಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ ಇಂದು ಬೆಳಗ್ಗೆ ಅಮಿತ್ ಷಾ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿ ಕೂಡಲೇ ರಾಜ್ಯಕ್ಕೆ ತೆರಳಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಸ್ಥಿತಿ ಅವಲೋಕಿಸಬೇಕೆಂದು ಸೂಚಿಸಿದ್ದಾರೆ. ಅದರಂತೆ ನಾನು ಈ ಕೂಡಲೆ ಬೆಂಗಳೂರಿಗೆ ಹಿಂದಿರುಗುತ್ತೇನೆ. ಮುಂದಿನ ವಾರ ಮತ್ತೆ ದೆಹಲಿಗೆ ತೆರಳುವುದಾಗಿ ಹೇಳಿದ್ದಾರೆ.

ನಾಳೆ ಬೆಳಗ್ಗೆ ಬೆಳಗಾವಿ ಮತ್ತು ಬಾಗಲಕೋಟೆ ಪ್ರವಾಸ ಕೈಗೊಳ್ಳಲಿರುವ ಬಿಎಸ್‍ವೈ ಜಮಖಂಡಿ, ಮುದೋಳ ಸೇರಿದಂತೆ ಮತ್ತಿತರ ಕಡೆ ವೈಮಾನಿಕ ಸಮೀಕ್ಷೆ ನಡೆಸಿ ನೆರೆ ಪರಿಸ್ಥಿತಿ ಬಗ್ಗೆ ಖುದ್ದು ಅವಲೋಕನ ಮಾಡಲಿದ್ದಾರೆ.

ಬೆಳಗ್ಗೆ ನವದೆಹಲಿಯಲ್ಲಿ ಕೃಷ್ಣ ಮತ್ತು ಘಟಪ್ರಭಾ ನದಿಗಳಲ್ಲಿ ಪ್ರವಾಹ ಉಂಟಾಗಿದ್ದರಿಂದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆದರು.
ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಚರ್ಚಿಸಿ ಕೈಗೊಂಡಿರುವ ಪರಿಹಾರ ಕಾರ್ಯಗಳು ಹಾಗೂ ಕೈಗೊಳ್ಳಬೇಕಾದ ಪರಿಹಾರದ ಬಗ್ಗೆಯೂ ಸೂಚನೆ ಕೊಟ್ಟಿದ್ದಾರೆ.

ಜಲಾವೃತ ಪ್ರದೇಶಗಳಿಂದ ತಕ್ಷಣವೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು. ಅಂಗನವಾಡಿ, ಸರ್ಕಾರಿ ಶಾಲೆಗಳು, ಸಮುದಾಯ ಭವನ ಸೇರಿದಂತೆ ಎಲ್ಲಿ ಅಗತ್ಯವಿದೆಯೋ ಅಂತಹ ಕಡೆ ಪರಿಹಾರ ಕೇಂದ್ರಗಳನ್ನು ತೆರೆಯಬೇಕು, ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಜಿಲ್ಲಾಡಳಿತ ಸ್ಪಂದಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.

ಈಗಾಗಲೇ ಕೇಂದ್ರದಿಂದ ಬಂದಿರುವ ಎನ್‍ಡಿಆರ್‍ಎಫ್ ಜೊತೆಗೆ ಎಸ್‍ಡಿಆರ್‍ಎಫ್, ಸ್ಥಳೀಯ ಪೊಲೀಸರ ನೆರವು ಪಡೆದು ಪರಿಹಾರ ಕಾರ್ಯ ಕೈಗೊಳ್ಳಬೇಕು, ಅಧಿಕಾರಿಗಳು 24 ಗಂಟೆಯೂ ಕೆಲಸ ಮಾಡಬೇಕು,ಯಾರೊಬ್ಬರಿಗೂ ರಜೆ ನೀಡಬಾರದು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.

ಆಕಾಂಕ್ಷಿಗಳಿಗೆ ನಿರಾಸೆ:
ರಾಜ್ಯದಲ್ಲಿ ಪ್ರವಾಹ ಉಂಟಾಗಿರುವುದರಿಂದ ಪರಿಹಾರ ಕಾರ್ಯ ಕೈಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಪುಟ ಸೇರ್ಪಡೆಯ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ.

ಇನ್ನೇನು ಸಂಪುಟ ಸೇರುತ್ತೇವೆಂದು ಮನಸ್ಸಲ್ಲಿ ಮಂಡಕ್ಕಿ ಮೇಯುತ್ತಿದ್ದ ಆಕಾಂಕ್ಷಿಗಳು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಈ ಹಿಂದೆ ಯಡಿಯೂರಪ್ಪ ವರಿಷ್ಠರ ಅನುಮತಿಯನ್ನು ಪಡೆಯದೇ ಸ್ವಂತ ನಿರ್ಧಾರವನ್ನು ಕೈಗೊಳ್ಳುತ್ತಿದ್ದರು. ಆದರೆ ಈ ಬಾರಿ ದೆಹಲಿಯಿಂದಲೇ ನಡೆಯುತ್ತಿರವುದರಿಂದ ಅವರ ಒಪ್ಪಿಗೆ ಇಲ್ಲದೆ ಹುಲ್ಲು ಕಡ್ಡಿಯೂ ಕೂಡ ಅಲುಗಾಡುವಂತಿಲ್ಲ ಎಂಬಂತಾಗಿದೆ.

ಮುಂದಿನ ವಾರ ಮತ್ತೆ ನವದೆಹಲಿಗೆ ತೆರಳಲಿರುವ ಯಡಿಯೂರಪ್ಪ ಸಂಪುಟ ವಿಸ್ತರಣೆಯ ಅಗತ್ಯತೆಯನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.

ಬಳಿಕವಷ್ಟೇ ಇದು ಅಂತಿಮವಾಗಲಿದೆ. ಅಲ್ಲಿಯವರೆಗೂ ಆಕಾಂಕ್ಷಿಗಳಿಗೆ ತಳಮಳ ತಪ್ಪಿದ್ದಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ