ಮುಂಬೈ, ಆ.7- ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಸತತ ನಾಲ್ಕನೆ ಭಾರಿ ಬಡ್ಡಿ ದರವನ್ನು ಕಡಿತಗೊಳಿಸಿದೆ. ಆರ್ಬಿಐ ತನ್ನ ರೆಪೋ ದರವನ್ನು 35 ಬೇಸಿಕ್ ಪಾಯಿಂಟ್ಗಳಿಂದ(ಬಿಪಿಎಸ್) ಶೇ.5.40ರಷ್ಟು ಇಳಿಕೆ ಮಾಡಿದೆ.
ಇದರಿಂದಾಗಿ ಗೃಹ ಸಾಲದ ಮೇಲಿನ ಬಡ್ಡಿ ಕಡಿಮೆಯಾಗಲಿದ್ದು, ಇಎಂಐ(ಈಕ್ವೇಟೆಡ್ ಮಂತ್ಲಿ ಇನ್ಸ್ಟಾಲ್ಮೆಂಟ್) ಅಥವಾ ಸಮಾನ ಮಾಸಿಕ ಕಂತು ಇಳಿಮುಖವಾಗಲಿದೆ. ಅಲ್ಲದೇ ವಾಹನ ಖರೀದಿಗೆ ಅನುಕೂಲವಾಗಲಿದೆ.ಜೊತೆಗೆ ಕಾರ್ಪೊರೇಟ್ ಕಂಪನಿಗಳ ವೆಚ್ಚ ಸಾಲ ಎತ್ತುವಳಿಗೂ ಪ್ರಯೋಜನವಾಗಲಿದೆ.
ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಹಣಕಾಸು ನೀತಿ ಕುರಿತ ಅನುಕೂಲಕರ ಧೋರಣೆ ಅನುಸರಿಸುವುದನ್ನು ಮುಂದುವರಿಸಿದೆ.
ಆರ್ಬಿಐ ಬಡ್ಡಿ ದರ ಕಡಿತ ಘೋಷಿಸಿರುವುದು ಈ ವರ್ಷದಲ್ಲಿ ಇದು ನಾಲ್ಕನೇ ಬಾರಿ. ಈ ಹಿಂದಿನ ಮೂರು ನೀತಿಗಳಲ್ಲಿ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು ಪ್ರತಿ ಭಾರಿ 25 ಬೇಸಿಕ್ ಪಾಯಿಂಟ್ಗಳಿಗೆ ಇಳಿಕೆ ಮಾಡಿತ್ತು.
ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿ ಹಣದುಬ್ಬರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಪರಿಷ್ಕರಣೆಗಳನ್ನು ಮಾಡಿದೆ. ಕಳೆದ ಜೂನ್ ತಿಂಗಳ ತ್ರೈಮಾಸಿಕ ನೀತಿಯಿಂದ ದೇಶೀಯ ಆರ್ಥಿಕ ಚಟುವಟಿಕೆಗೆ ದುರ್ಬಲವಾಗಿ ಮುಂದುವರಿದಿದೆ. ಜಾಗತಿಕ ಆರ್ಥಿಕ ಹಿನ್ನಡೆ ಮತ್ತು ವಾಣಿಜ್ಯ-ವ್ಯಾಪಾರ ಸಮರದಿಂದಾಗಿ ಆತಂಕಕಾರಿ ವಿದ್ಯಮಾನಗಳ ಹಿನ್ನೆಲೆಯಲ್ಲಿ ಆರ್ಬಿಐ ಕೆಲವು ಸುಧಾರಣೆ ನೀತಿ ಅನುಸರಿಸಿದೆ.
ಆರ್ಬಿಐ 2019-20ನೇ ಆರ್ಥಿಕ ವರ್ಷಕ್ಕಾಗಿ ವಾಸ್ತವ ಜಿಡಿಪಿ ಬೆಳವಣಿಗೆಯನ್ನು ಶೇ.7 ರಿಂದ ಶೇ.6.9ರಷ್ಟು ಇಳಿಮುಖವಾಗಿ ಪರಿಷ್ಕರಿಸಿದೆ.
ಆರ್ಬಿಐ ಕ್ರಮಗಳ ಕುರಿತು ಸಭೆಯ ನಂತರ ಸುದ್ದಿಗಾರರಿಗೆ ವಿವರಿಸಿದ ಗೌರ್ನರ್ ಶಕ್ತಿಕಾಂತ್ ದಾಸ್, ಕುಂಠಿತಗೊಂಡಿರುವ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಹಾಗೂ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ರೆಪೋ ದರಗಳನ್ನು ಕಡಿಮೆ ಮಾಡಲಾಗಿದೆ ಎಂದರು.
ಎಲ್ಲ ವಲಯಗಳಿಗೂ ಸೂಕ್ತವಾಗುವ ರೀತಿಯಲ್ಲಿ ಬಡ್ಡಿ ದರವನ್ನು ಕಡಿಮೆಗೊಳಿಸಲಾಗಿದೆ. ಔಟ್ಪುಟ್ ಗ್ಯಾಪ್ಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಕೆಲವು ಪರಿಷ್ಕರಣೆ ಮಾಡಲಾಗಿದೆ ಎಂದು ಆರ್ಬಿಐ ಗೌರ್ನರ್ ವಿವರಿಸಿದರು.
ಈ ಹಿಂದೆ ಮೂರು ಬಾರಿ ಆರ್ಬಿಐ ಕಡಿತಗೊಳಿಸಿದ ಬಡ್ಡಿ ದರಗಳನ್ನು ಮಾರುಕಟ್ಟೆ ಪೂರ್ಣಪ್ರಮಾಣದಲ್ಲಿ ಸದ್ಭಳಕೆ ಮಾಡಿಕೊಂಡಿದೆ ಎಂದ ಅವರು ಬ್ಯಾಂಕುಗಳು ಮುಂದೆ ಮತ್ತಷ್ಟು ಬಡ್ಡಿ ದರ ಕಡಿತಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ಮಾಡಿದರು.