ಶ್ರೀನಗರ: ಇಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸಿದ್ದು, ಪರಿಚ್ಛೇಧ 370 ಮತ್ತು 35(ಎ) ಕೂಡ ರದ್ದು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಟ್ವೀಟ್ ಮಾಡಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯಸಭೆಯಲ್ಲಿ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಿ, ಇನ್ನು ಮುಂದೆ ಜಮ್ಮು-ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಡಲಿದ್ದು, ಲಡಾಕ್ ಕೇಂದ್ರಾಡಳಿಯ ಪ್ರದೇಶವಾಗಲಿದೆ. ಈ ಬಗ್ಗೆ ಮೆಹಬೂಬಾ ಮುಫ್ತಿ ಅವರು ಟ್ವೀಟ್ ಮಾಡಿ, ಕೇಂದ್ರದ ಈ ನಿರ್ಧಾರ ಸರಿಯಲ್ಲ. ಇಂದು ಭಾರತೀಯ ಪ್ರಜಾಪ್ರಭುತ್ವಕ್ಕೆ ಕರಾಳ ದಿನವಾಗಿದೆ. ಈ ನಿರ್ಧಾರ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಹರಿಹಾಯ್ದಿದ್ದಾರೆ.
ಟ್ವೀಟ್ನಲ್ಲಿ ಏನಿದೆ?
ಇಂದು ಭಾರತ ಪ್ರಜಾಪ್ರಭುತ್ವದ ಕರಾಳ ದಿನವಾಗಿದೆ. 1947ರಲ್ಲಿ 2 ರಾಷ್ಟ್ರಗಳ ಸಿದ್ಧಾಂತವನ್ನು ತಿರಸ್ಕರಿಸಿ, ಜಮ್ಮು-ಕಾಶ್ಮೀರ ನಾಯಕತ್ವ ಭಾರತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರವನ್ನು ಹಿಮ್ಮೆಟ್ಟಿತ್ತು. ಆರ್ಟಿಕಲ್ 370 ಅನ್ನು ಸ್ಕ್ರ್ಯಾಪ್ ಮಾಡಿರುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರ ಕಾನೂನುಬಾಹಿರ ಮತ್ತು ಅಸಂವಿಧಾನಿಕವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತವನ್ನು ಆಕ್ಯೂಪೇಷನಲ್ ಫೋರ್ಸ್ ಆಗಿ ಮಾಡುತ್ತದೆ.
ಈ ನಿರ್ಣಯ ದುರಂತ ಪರಿಣಾಮಗಳನ್ನು ಉಂಟುಮಾಡುತ್ತದೆ. ಕೇಂದ್ರ ಸರ್ಕಾರದ ಉದ್ದೇಶಗಳು ಸ್ಪಷ್ಟವಾಗಿದ್ದು, ಜನರನ್ನು ಭಯಭೀತಿಗೊಳಿಸುವ ಮೂಲಕ ಜಮ್ಮು- ಕಾಶ್ಮೀರ ಪ್ರದೇಶವನ್ನು ಪಡೆಯಲು ಬಯಸಿದ್ದಾರೆ. ಭಾರತ ಕಾಶ್ಮೀರಕ್ಕೆ ಕೊಟ್ಟ ತನ್ನ ಭರವಸೆಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಅಮಿತ್ ಶಾ ಮಾತು ಆರಂಭಿಸುತ್ತಿದ್ದಂತೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ವಿರೋಧ ವ್ಯಕ್ತಪಡಿಸಿದರು. ಮಸೂದೆಗೂ ಮಂಡನೆಗೂ ಮುನ್ನ ಚರ್ಚೆ ನಡೆಯಬೇಕು. ಕಾಶ್ಮೀರದಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾಗಿದ್ದು, ಜನತೆ ಭಯಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಸ್ಥಳೀಯ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಡರಾತ್ರಿ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ, ಸಜ್ಜದ್ ಲೋನ್ ಅವರನ್ನು ವಶಕ್ಕೆ ಪಡೆದು ಗೃಹಬಂಧನದಲ್ಲಿ ಇರಿಸಲಾಗಿದೆ. ರಾಜ್ಯದಲ್ಲಿ ಬೃಹತ್ ಭದ್ರತೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇಡಲಾಗಿದೆ.
ತಡರಾತ್ರಿಯಿಂದ ಶ್ರೀನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಗುಂಪು ಗುಂಪಾಗಿ ರಸ್ತೆಗಳಲ್ಲಿ ನಿಲ್ಲುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಕೆಲವು ಪ್ರದೇಶಗಳಲ್ಲಿ ಇಂಟರ್‍ನೆಟ್ ಸೇವೆ, ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರಿಗೆ ಹಿಂದಿರುಗುವಂತೆ ಸೂಚಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮೆಹಬೂಬಾ ಮುಫ್ತಿಯವರು ಭಾನುವಾರದಂದು ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲು ಖಾಸಗಿ ಹೋಟೆಲಿನಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದ್ದರು. ಆದರೆ ಯಾವುದೇ ಸಭೆ ನಡೆಸುವಂತಿಲ್ಲ ಎಂದು ಪೊಲೀಸರು ಹೋಟೆಲ್ ಬುಕ್ಕಿಂಗ್ ರದ್ದುಗೊಳಿಸಿದ್ದರು. ಹೀಗಾಗಿ ಮುಫ್ತಿ ಅವರು ತಮ್ಮ ಮನೆಯಲ್ಲಿ ಸಭೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ಮುಜಾಗ್ರತಾ ಕ್ರಮವಾಗಿ ಪೊಲೀಸರು ಅವರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ.