ಪ್ರವಾಸೋದ್ಯಮ ಕ್ಷೇತ್ರದಲ್ಲಿರುವ ವಿಫುಲವಾದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು-ಸಿಎಂ ಯಡಿಯೂರಪ್ಪ

ಬೆಂಗಳೂರು, ಆ.4- ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿಂದು ರಾಜ್ಯದ ಪ್ರವಾಸೋದ್ಯಮ ಮತ್ತು ಸಾಂಸ್ಕøತಿಕ ಅಭಿವೃದ್ಧಿಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದ ಅವರು, ಕೆಮ್ಮಣ್ಣುಗುಂಡಿ, ನಂದಿಬೆಟ್ಟ, ಬಾದಾಮಿ, ಜೋಗ್‍ಜಲಪಾತ ಸೇರಿದಂತೆ ಹತ್ತಾರು ಪ್ರವಾಸಿ ತಾಣಗಳು ರಾಜ್ಯದಲ್ಲಿವೆ. ರಾಜ್ಯವೊಂದು ಹಲವು ಜಗತ್ತುಗಳು ಎಂಬ ರೀತಿಯಲ್ಲಿ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಪ್ರವಾಸೋದ್ಯಮ ಕ್ಷೇತ್ರದಿಂದ ಶೇ.14.8ರಷ್ಟು ಕೊಡುಗೆಯನ್ನು ರಾಜ್ಯಕ್ಕೆ ನೀಡಲಾಗುತ್ತಿದೆ.

ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಮಂದಿಗೆ ಪ್ರವಾಸೋದ್ಯಮ ಕ್ಷೇತ್ರ ಉದ್ಯೋಗ ಒದಗಿಸಿದೆ.

ಪಾರಂಪರಿಕ, ಐತಿಹಾಸಿಕ, ಧಾರ್ಮಿಕ ಕ್ಷೇತ್ರಗಳು ಸಾಕಷ್ಟಿವೆ. ಇತ್ತೀಚೆಗೆ ಆರೋಗ್ಯ, ಪ್ರವಾಸೋದ್ಯಮ ಕ್ಷೇತ್ರ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ದೇಶೀಯ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಒಟ್ಟಾರೆ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ರೂಪಿಸುವ ಅಗತ್ಯವಿದೆ. ವಸತಿ ಗೃಹ, ರಸ್ತೆ, ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕಿದೆ. ಪ್ರವಾಸಿ ತಾಣಗಳ ನಿರ್ವಹಣೆ ಜತೆಗೆ ತರಬೇತಿ ಹೊಂದಿದ ಗೈಡ್‍ಗಳನ್ನು ನೇಮಿಸಬೇಕಿದೆ. ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಫುಲವಾದ ಅವಕಾಶಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ.

ಹೊರರಾಜ್ಯ ಹಾಗೂ ವಿದೇಶಿಗರಿಗೆ ನಾಡಿನ ಕಲೆ, ಸಂಸ್ಕøತಿ ಹಾಗೂ ಪರಂಪರೆಯನ್ನು ಪರಿಚಯಿಸಬೇಕಿದೆ. ಜಾನಪದ ಕಲಾ ಪ್ರಾಕಾರಗಳನ್ನು ಹೊರ ರಾಜ್ಯ, ದೇಶದವರಿಗೆ ಪರಿಚಯಿಸುವುದನ್ನು ಪ್ರವಾಸೋದ್ಯಮ ನೀತಿಯಲ್ಲಿ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹೇಳಿದರು.

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾಮೂರ್ತಿ ಮಾತನಾಡಿ, ದೇಶ-ವಿದೇಶಗಳ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿರುವ ದೇವಾಲಯ, ಕಲೆ, ಸಾಂಸ್ಕøತಿಕ, ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕೆಂಬ ಭಾವನೆ ವ್ಯಕ್ತವಾಯಿತು. ಗದಗ್‍ನ ಲಕ್ಷ್ಮೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದು, ಪ್ರತಿ ವರ್ಷ ಹುಲಿಗೆರೆ ಉತ್ಸವ ನಡೆಸಲಾಗುತ್ತಿದೆ. ಇದೇ ರೀತಿ ಹಲವು ಕೇಂದ್ರಗಳಲ್ಲಿ ಉತ್ಸವ ಮಾಡಬಹುದಾಗಿದೆ ಎಂದು ಹೇಳಿದರು.

ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀನಾರಾಯಣ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕಾರ್ಯದರ್ಶಿ ಶಿವಯೋಗಿ ಕಳಸದ್ ಸೇರಿದಂತೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ