ಪಾಲಿಕೆಯ 11 ಆಸ್ತಿಗಳ ಪೈಕಿ 6 ಆಸ್ತಿಗಳ ಋಣಮುಕ್ತ-ಮೇಯರ್ ಗಂಗಾಂಬಿಕೆ

ಬೆಂಗಳೂರು, ಆ.3- ಬಿಜೆಪಿ ಅವಧಿಯಲ್ಲಿ ಬಿಬಿಎಂಪಿ ಆಸ್ತಿಯನ್ನು ಅಡಮಾನ ಇಟ್ಟಿದ್ದುದನ್ನು ಕಾಂಗ್ರೆಸ್ ಆಡಳಿತ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಎಂ.ಶಿವರಾಜ್ ಅವರು ಆಡಳಿತ ಪಕ್ಷದ ನಾಯಕರಾಗಿದ್ದಾಗ ಅಡಮಾನವಿಟ್ಟಿದ್ದ ಪಾಲಿಕೆ ಆಸ್ತಿಯನ್ನು ಬಿಡಿಸಿಕೊಳ್ಳಲು ಚಾಲನೆ ನೀಡಿದ್ದರು. ಪಾಲಿಕೆಯ 11 ಆಸ್ತಿಗಳ ಪೈಕಿ ಈಗಾಗಲೇ 6 ಆಸ್ತಿಗಳನ್ನು ಋಣಮುಕ್ತಗೊಳಿಸಲಾಗಿದೆ. ಹಿಂದಿನ ಕೌನ್ಸಿಲ್ ಅವಧಿಯಲ್ಲಿ ಅಡಮಾನವಿಟ್ಟು ಸಾಲ ಪಡೆದಿದ್ದ ಪಾಲಿಕೆ ಆಸ್ತಿಗಳನ್ನು ಋಣಮುಕ್ತಗೊಳಿಸಲು ಪಾಲಿಕೆ ನಿರ್ಧರಿಸಿತ್ತು. ಅದರಂತೆ ಆಸ್ತಿಗಳನ್ನು ಬಿಡಿಸಿಕೊಳ್ಳಲು ಚಾಲನೆ ನೀಡಲಾಗಿದೆ.

ಉಳದಿರುವ 5 ಆಸ್ತಿಗಳಲ್ಲಿ 4 ಆಸ್ತಿಗಳನ್ನು ಋಣಮುಕ್ತಗೊಳಿಸಲು ಪಾಲಿಕೆ ಸಿದ್ದತೆ ನಡೆಸಿದೆ. ಪಿಯುಬಿ ಕಟ್ಟಡ, ಕೆ.ಆರ್.ಮಾರುಕಟ್ಟೆ, ಬಿಬಿಎಂಪಿ ಪಶ್ಚಿಮ ವಲಯ ಕಚೇರಿ, ದಾಸಪ್ಪ ಆಸ್ಪತ್ರೆ, ಕಲಾಸಿಪಾಳ್ಯ ಮಾರುಕಟ್ಟೆ ಕಟ್ಟಡಗಳು ಅಡಮಾನದಲ್ಲಿವೆ.

2016-17ರಲ್ಲಿ ಹುಡ್ಕೋ ಸಂಸ್ಥೆಯಿಂದ 4 ಕಟ್ಟಡಗಳನ್ನು ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾದಲ್ಲಿ 871 ಕೋಟಿ ರೂ.ಗೆ ಅಡಮಾನ ಇಟ್ಟು ಕಡಿಮೆ ಬಡ್ಡಿ ದರಕ್ಕೆ ವರ್ಗಾಯಿಸಲಾಗಿತ್ತು.

ಇದೀಗ ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾಗೆ 871 ಕೋಟಿ ರೂ. ಹಣ ಸಂದಾಯ ಪೂರ್ಣಗೊಂಡಿದ್ದು, ಇಲ್ಲಿ ಅಡಮಾನ ಇಟ್ಟಿದ್ದ ಕಟ್ಟಡಗಳನ್ನು ಋಣಮುಕ್ತಗೊಳಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.

ಸದ್ಯಕ್ಕೆ ಕೆ.ಆರ್.ಮಾರುಕಟ್ಟೆ ಹೊರತು ಪಡಿಸಿ ಪಿಯುಬಿ ಕಟ್ಟಡ, ಬಿಬಿಎಂಪಿ ಪಶ್ಚಿಮ ವಲಯ ಕಚೇರಿ, ದಾಸಪ್ಪ ಆಸ್ಪತ್ರೆ, ಕಲಾಸಿಪಾಳ್ಯ ಮಾರುಕಟ್ಟೆ ಕಟ್ಟಡಗಳು ಋಣಮುಕ್ತವಾಗಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

2019-20ನೇ ಸಾಲಿನ ಪೂರ್ಣ ವರ್ಷದ ಕಂತಿನ ಮೊತ್ತ 188.78 ಕೋಟಿ .2019ರ ಮೇ ಅವಧಿ ಪೂರ್ವವೇ ಇದನ್ನು ಪಾವತಿ ಮಾಡಲಾಗಿದೆ.ಎಸ್‍ಬಿಐನಲ್ಲಿ ಒಟ್ಟು ಸಾಲದ ಮೊತ್ತ 871.67 ಕೋಟಿ ರೂ.ಇದರಲ್ಲಿ ಒಟ್ಟು 408.02 ಕೋಟಿ ರೂ.ಗಳನ್ನು ಪಾವತಿ ಮಾಡಲಾಗಿದೆ. ಬಾಕಿ 463.65 ಕೋಟಿ ರೂ. ಮಾತ್ರ ಉಳಿದಿದೆ. ಈ ಸಾಲದ ಮೊತ್ತಕ್ಕೆ ಅನುಗುಣವಾಗಿ ಕೆ.ಆರ್.ಮಾರುಕಟ್ಟೆಯನ್ನು ಮಾತ್ರ ಉಳಿಸಿ ಉಳಿದ ನಾಲ್ಕು ಸ್ವತ್ತುಗಳನ್ನು ಋಣಮುಕ್ತ ಮಾಡಿ ಪಾಲಿಕೆ ವಶಕ್ಕೆ ನೀಡಬೇಕೆಂದು ಕೋರಿ ಎಸ್‍ಬಿಐಗೆ ಈಗಾಗಲೇ ಪತ್ರ ಬರೆಯಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ