ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಸಿಎಂ ದೆಹಲಿಗೆ

ಬೆಂಗಳೂರು,ಆ.2-ಸಚಿವ ಸಂಪುಟ ವಿಸ್ತರಣೆ, ನೆನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನ ಹಾಗೂ ಬರಗಾಲಕ್ಕೆ ಆರ್ಥಿಕ ನೆರವು ನೀಡುವುದು ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ನವದೆಹಲಿಗೆ ತೆರಳಲಿದ್ದಾರೆ.

ಒಟ್ಟು ಮೂರು ದಿನಗಳ ಕಾಲ ನವದೆಹಲಿಯಲ್ಲಿ ವಾಸ್ತವ್ಯ ಹೂಡಲಿರುವ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಕೇಂದ್ರದ ವಿವಿಧ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸುವರು.

ರಾಜ್ಯದಿಂದಲೂ ಉನ್ನತಾಧಿಕಾರಿಗಳ ನಿಯೋಗ ಮುಖ್ಯಮಂತ್ರಿಯವರೊಂದಿಗೆ ತೆರಳಲಿದ್ದು, ಕುಡಿಯುವ ನೀರಿನ ಯೋಜನೆಗಳು, ರಾಜ್ಯಕ್ಕೆ ಬಿಡುಗಡೆಯಾಗಬೇಕಾಗಿರುವ ಯೋಜನೆಗಳು, ಆರ್ಥಿಕ ನೆರವು ನೀಡುವುದರ ಬಗ್ಗೆ ಕೇಂದ್ರದ ಸಚಿವರಿಗೆ ಅಧಿಕಾರಿಗಳ ತಂಡ ಮನವರಿಕೆ ಮಾಡಿಕೊಡಲಿದೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಲಿರುವ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡಲು ಅನುಮತಿ ನೀಡುವಂತೆ ಕೋರುವರು.

ಈಗಾಗಲೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಸಚಿವ ಸಂಪುಟ ವಿಸ್ತರಣೆಯಾಗುವ ಅಗತ್ಯತೆಯನ್ನು ರಾಷ್ಟ್ರೀಯ ನಾಯಕರಿಗೆ ವಿವರಿಸಲಿದ್ದಾರೆ.

ಮೊದಲ ಹಂತದಲ್ಲಿ ಎಷ್ಟು ಮಂದಿಯನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಯಾರ್ಯಾರಿಗೆ ಯಾವ ಖಾತೆ ನೀಡಬೇಕು, ಜಿಲ್ಲಾವಾರು, ಪ್ರದೇಶವಾರು, ಜಾತಿವಾರು, ವಿವರ ಹಾಗೂ ಪಕ್ಷಕ್ಕೆ ಸಲ್ಲಿಸಿರುವ ಸೇವೆ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆಗೆ ಅವಕಾಶ ನೀಡುವಂತೆ ಬಿಎಸ್‍ವೈ ಮನವಿ ಮಾಡಲಿದ್ದಾರೆ.

ಒಂದು ವೇಳೆ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದರೆ ಇದೇ 7 ಇಲ್ಲವೆ 9ರಂದು ಸಚಿವ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ