ಮರಿ ಸಚಿನ್ ಪೃಥ್ವಿ ಶಾಗೆ ಬಿಸಿಸಿಐ ಬಿಗ್ ಶಾಕ್..! ಪೃಥ್ವಿಗೆ 8 ತಿಂಗಳು ನಿಷೇಧ ವಿಧಿಸಿದ ಬಿಸಿಸಿಐ..!

ಟೀಮ್ ಇಂಡಿಯಾದ ಮರಿ ಸಚಿನ್ ಪೃಥ್ವಿ ಶಾಗೆ ಬಿಸಿಸಿಐ ಶಾಕ್ ನೀಡಿದೆ. ಡೋಪಿಂಗ್ ಟೆಸ್ಟ್ನಲ್ಲಿ ಫೇಲ್ ಆಗಿರುವ ಪೃಥ್ವಿ ಶಾ ಮೇಲೆ ಕಠಿಣ ಕ್ರಮ ಕೈಗೊಂಡಿದೆ. 8 ತಿಂಗಳುಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಪೃಥ್ವಿಯನ್ನ ಬ್ಯಾನ್ ಮಾಡಲಾಗಿದೆ.

ಮರಿ ಸಚಿನ್ ಪೃಥ್ವಿ ಶಾ ಡೋಪಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ ಎಂದಾಗ ಸ್ವತಃ ಪೃಥ್ವಿ ಮಾತ್ರ ಅಲ್ಲ ಯಾವ ಕ್ರಿಕೆಟ್ ಅಭಿಮಾನಿಗಳಗೂ ಒಂದು ಕ್ಷಣ ಅರಗಿಸಿಕೊಳ್ಳಲು ಆಗಲಿಲ್ಲ. ಜಸ್ಟ್ 19 ವರ್ಷದ ಪೃಥ್ವಿ ಈಗಷ್ಟೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಂಬೆ ಗಾಲು ಇಡುತ್ತಿದ್ದಾರೆ. ಸಚಿನ್ನಂತೆ ಬ್ಯಾಟಿಂಗ್ ಮಾಡೋ ಪೃಥ್ವಿ ಅಂಥ ಘನ ಘೋರ ತಪ್ಪು ಏನು ಮಾಡಿದ್ರು ಅಂತಾ ಆಶ್ಚರ್ಯ ಪಟ್ಟವರೇ ಹೆಚ್ಚು.

ಡೋಪಿಂಗ್ ಪರೀಕ್ಷೆ ಯಲ್ಲಿ ಮರಿ ಸಚಿನ್ ಫೇಲ್
ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ವೇಳೆ ಡೋಪಿಂಗ್ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಮುಂಬೈ ತಂಡದ ಆಟಗಾರನಾದ ಪೃಥ್ವಿ ಶಾಗೂ ಡೋಪಿಂಗ್ ತಡೆ ಮಂಡಳಿ ಪರೀಕ್ಷೆಗೊಳಪಡಿಸಿತ್ತು. ಆಗ ಪೃಥ್ವಿ ಮೂತ್ರದ ಮಾದರಿಯಲ್ಲಿ ನಿಷೇಧಿತ ಮದ್ದಿನ ಅಂಶ ಟೆರ್ಬುಟಲೈನ್ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್ ನಿಯಮಾ ಉಲ್ಲಂಘನೆ ಅರ್ಟಿಕಲ್ 2.1 ಪ್ರಕಾರ ಪೃಥ್ವಿ ಶಾಗೆ 8 ತಿಂಗಳ ಕಾಲ ಕ್ರಿಕೆಟ್ನಿಂದ ಅಮಾನತು ಮಾಡಿ ಬಿಸಿಸಿಐ ಆದೇಶ ಹೊರಡಿಸಿದೆ.. ಹೀಗಾಗಿ ನವೆಂಬರ್ 15ರವರೆಗೆ ಯಾವುದೇ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸದಂತಾಗಿದೆ.

ಪೃಥ್ವಿ ಶಾ ಜೊತೆಗೆ ಮತ್ತಿಬ್ಬರು ಆಟಗಾರರಿಗೆ ನಿಷೇಧ..!
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಪೃಥ್ವಿ ಶಾರೊಂದಿಗೆ ಮತ್ತಿಬ್ಬರು ದೇಶಿಯ ಕ್ರಿಕೆಟ್ ಆಟಗಾರರಾದ ವಿದರ್ಭದ ಅಕ್ಷಯ್ ದುಲ್ಲರ್, ರಾಜಸ್ಥಾನದ ದಿವ್ಯಾ ಗಜರಾಜ್ ಕೂಡ ಡೋಪಿಂಗ್ ಟೆಸ್ಟ್ನಲ್ಲಿ ಪೇಲ್ ಆಗಿದ್ದಾರೆ. ಅವರಿಗೂ ಸಹ 8 ತಿಂಗಳ ನಿಷೇಧದ ಶಿಕ್ಷೆ ನೀಡಲಾಗಿದೆ.

ಇನ್ನು ಈ ಬಗ್ಗೆ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿರುವ ಪೃಥ್ವಿ ಶಾ ಅದು ನಿಷೇಧದ ದ್ರವ್ಯ ಎಂದು ನನಗೆ ತಿಳಿದಿರಲಿಲ್ಲ ಎಂದು ತಿಳಿಸಿದ್ದಾರೆ..

2019ರ ನವೆಂಬರ್ ವರೆಗೆ ನನಗೆ ಕ್ರಿಕೆಟ್ ಆಡಲು ಆಗುವುದಿಲ್ಲ ಎಂಬುದು ನನಗೆ ತಿಳಿದಿದೆ. ಫೆಬ್ರವರಿ 2019ರಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ಪರ ಆಡುತ್ತಿರುವಾಗ ತೀವ್ರ ಕೆಮ್ಮು ಮತ್ತು ಶೀತಕ್ಕೆ ನಾನು ಅಜಾಗರೂಕತೆಯಿಂದ ಸಿರಪ್ ಸೇವಿಸಿದ್ದೆ. ಇದರಲ್ಲಿ ನಿಷೇಧಿತ ಅಂಶವಿತ್ತು.

ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ನಾನು ಸಕ್ರಿಯನಾಗಿರಲು ಬಯಸಿದ್ದೆ. ಆದ್ದರಿಂದ ಕೆಮ್ಮಿಗೆ ಮದ್ದು ತೆಗೆದುಕೊಳ್ಳುವಾಗ ಮುನ್ನೆಚ್ಚರಿಕೆ ವಹಿಸಿಸಲಿಲ್ಲ.

ಕ್ರಿಕೆಟ್ ನನ್ನ ಜೀವನವಾಗಿದೆ. ಟೀಮ್ ಇಂಡಿಯಾ, ಮುಂಬೈ ಪರ ಆಡುವುದಕ್ಕಿಂತ ನನಗೆ ಯಾವುದು ಮುಖ್ಯವಾಗಿರಲಿಲ್ಲ.. ಗಾಯದ ಸಮಸ್ಯೆಯಿಂದ ಭಾರತಕ್ಕೆ ವಾಪಸ್ ಆಗಿದ್ದೆ. ಆಗ ಕ್ರಿಕೆಟ್ ಆಡ ಬೇಕೆಂಬ ಆತುರದಲ್ಲಿ ಪ್ರೊಟೋ ಕಾಲ್ ಉಲ್ಲಂಘಿಸಿದ್ದೇನೆ. ಈ ಘಟನೆಯಿಂದ ಬೇಗ ಹೊರಬರುವ ನಂಬಿಕೆ ನನಗಿದೆ. ನನ್ನ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪೃಥ್ವಿ ಶಾ ತಿಳಿಸಿದ್ದಾರೆ.

ಈ ಹಿಂದೆ ಬ್ಯಾನ್‌ ಆಗಿದ್ದ ಆಲ್ರೌಂಡರ್ ಯೂಸುಫ್ ಪಠಾಣ್..!
ಹೀಗೆ ಪ್ರಸಿದ್ದ ಕ್ರಿಕೆಟಿಗನೊಬ್ಬ ಈ ರೀತಿ ಬ್ಯಾನ್‌ಗೆ ಒಳಗಾಗುತ್ತಿರುವುದು ಇದು ಎರಡನೇ ಬಾರಿ ಆಗಿದೆ. ಇದಕ್ಕೂ ಮೊದಲು ಆಗಸ್ಟ್ 15 2017ರಲ್ಲಿ ಉದ್ದೀಪನಾ ಮದ್ದು ಸೇವನಾ ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಆಲ್ ರೌಂಡರ್ ಯೂಸೂಫ್ ಪಠಾಣ್ 5 ತಿಂಗಳ ಕಾಲ ಬ್ಯಾನ್ ಆಗಿದ್ರು. ಕಫಾ ಸೀರಪ್ನಲ್ಲಿ ನಿಷೇಧಿತ ಟೆರ್ಬುಟಲೈನ್ ಮಾದರಿ ಅಂಶ ಪತ್ತೆಯಾಗಿತ್ತು ಎಂದು ಬಿಸಿಸಿಐ ಅಮಾನತು ಮಾಡಿತ್ತು..

ಬಾಂಗ್ಲಾದೇಶ, ಸೌತ್ ಆಫ್ರಿಕಾ ಸರಣಿಯಿಂದ ಶಾ ಔಟ್..!
ಕಳೆದ ವಿಂಡೀಸ್ ಟೆಸ್ಟ್ ಸರಣಿ ವೇಳೆ ಪಾದಾರ್ಪಣೆ ಮಾಡಿದ್ದ 19 ವರ್ಷದ ಪೃಥ್ವಿ ಶಾ ಅತ್ಯುತ್ತಮ ಪ್ರದರ್ಶನ ನೀಡಿದ್ರು. ಈ ಮೂಲಕ ಟೀಮ್ ಇಂಡಿಯಾದ ಭವಿಷ್ಯದ ಸಚಿನ್ ಅಂತಲೇ ಕರೆಯಲಾಗ್ತಿತ್ತಿತ್ತು. ನಂತರ ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಆಗಿದ್ದ ಶಾ ಗಾಯದ ಸಮಸ್ಯೆಯಿಂದ ಹೊರ ಬಿದ್ದಿದ್ರು. ಇದೀಗ ನಿಷೇಧದ ಶಿಕ್ಷೆಗೊಳಗಾಗಿದ್ದು. ಮುಂಬರುವ ಬಾಂಗ್ಲಾದೇಶ ಹಾಗೂ ಸೌತ್ ಆಫ್ರಿಕಾ ಸರಣಿಯಿಂದಲೂ ವಂಚಿತರಾಗಿದ್ದಾರೆ..

ಅದೇನೇ ಆಗಲಿ ಕ್ರಿಕೆಟ್ ಲೋಕದಲ್ಲಿ ಈಗಷ್ಟೆ ಹೆಜ್ಜೆ ಇಡುತ್ತಿರುವ ಮರಿ ಸಚಿನ್ ಪೃಥ್ವಿ ಇನ್ನೊಮ್ಮೆ ಜಾರಿ ಬೀಳದಿರಲಿ ಅನ್ನೋದೇ ಕ್ರಿಕೆಟ್ ಅಭಿಮಾಣಿಗಳ ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ