ಬೆಂಗಳೂರು, ಮಾ.28- ನಾಳೆಯಿಂದ ಐದು ದಿನಗಳವರೆಗೆ ಬ್ಯಾಂಕಿಂಗ್ ವಹಿವಾಟು ನಡೆಯುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ಸ್ಪಷ್ಟಪಡಿಸಿದ್ದು, ಮಾ.31 ಶನಿವಾರ ಎಂದಿನಂತೆ ಬ್ಯಾಂಕ್‍ಗಳು ಗ್ರಾಹಕರ ಸೇವೆಗೆ ತೆರೆದಿರುತ್ತವೆ.
ಸಂಘಟನೆಯ ಕರ್ನಾಟಕ ಘಟಕ ಪ್ರಧಾನ ಕಾರ್ಯದರ್ಶಿ ಎಂ.ಕೆ.ನರಸಿಂಹ ಅವರು ಈ ಸಂಬಂಧ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಮಹಾವೀರ ಜಯಂತಿ ಹಾಗೂ ಗುಡ್‍ಫ್ರೈಡೆ ಇರುವುದರಿಂದ ಗುರುವಾರ ಮತ್ತು ಶುಕ್ರವಾರ ಸಾರ್ವಜನಿಕ ರಜಾದಿನಗಳಾಗಿವೆ. ಆದರೆ, ಶನಿವಾರ ಎಂದಿನಂತೆ ಬ್ಯಾಂಕ್ ವಹಿವಾಟು, ಹಣ ಸ್ವೀಕೃತಿ ಮತ್ತು ಪಾವತಿ ನಡೆಯಲಿದೆ.
ತೆರಿಗೆ ಪಾವತಿದಾರರಿಗೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಂದು ಕೆಲಸದ ಅವಧಿಯನ್ನು ಅರ್ಧದಿಂದ ಒಂದು ಗಂಟೆವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಏ.1ರಂದು ಭಾನುವಾರ ರಜೆ ಇರುವುದರಿಂದ ವಾರ್ಷಿಕ ಲೆಕ್ಕಪತ್ರ ಅಂತಿಮಗೊಳಿಸಲು ಏ.2ರಂದು ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತವೆ. ಅಂದು ಗ್ರಾಹಕರ ಸೇವೆಗಳು ಲಭ್ಯವಿರುವುದಿಲ್ಲ. ಏ.3ರಂದು ಎಂದಿನಂತೆ ಗ್ರಾಹಕರಿಗೆ ಸೇವೆಗಳು ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ.